ದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿ: ಕೇಜ್ರಿವಾಲ್

Update: 2023-10-06 15:08 GMT

 ಅರವಿಂದ್ ಕೇಜ್ರಿವಾಲ್| Photo: PTI

ಹೊಸದಿಲ್ಲಿ: ಪ್ರತಿಪಕ್ಷಗಳು ಮತ್ತು ಅವುಗಳ ನಾಯಕರನ್ನು ಬಗ್ಗುಬಡಿಯುವ ಮತ್ತು ಬೆದರಿಕೆಯೊಡ್ಡುವ ಪ್ರಯತ್ನವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಮತ್ತು ಭೀತಿಯ ವಾತಾವರಣವನ್ನು ಸೃಷ್ಟಿಸಲಾಗಿದೆ,ಇದು ದೇಶಕ್ಕೆ ಒಳ್ಳೆಯದಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಇಲ್ಲಿ ಹೇಳಿದರು.

ಕೇಂದ್ರೀಯ ಏಜೆನ್ಸಿಗಳು ನಡೆಸುತ್ತಿರುವ ಹಲವಾರು ದಾಳಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಹಲವಾರು ನಿದರ್ಶನಗಳಲ್ಲಿ ಬಿಜೆಪಿಗೆ ಸೇರಿಸಿಕೊಳ್ಳಲು ಜನರನ್ನು ವಿಭಜಿಸಲಾಗುತ್ತಿದೆ,ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಅವರು ಆರೋಪಿಸಿದರು.

ಪ್ರತಿಪಕ್ಷ ನಾಯಕರು ಮಾತ್ರವಲ್ಲ,ಹಲವಾರು ಉದ್ಯಮಿಗಳನ್ನೂ ಗುರಿಯಾಗಿಸಿಕೊಳ್ಳಲಾಗುತ್ತಿದೆ. ಭೀತಿಯ ವಾತಾವರಣವನ್ನು ಸೃಷ್ಟಿಸಲಾಗಿದ್ದು,ಇದು ದೇಶಕ್ಕೆ ಒಳ್ಳೆಯದಲ್ಲ. ಒಂದು ದೇಶವು ಹೀಗೆ ಬೆಳೆಯಲು ಸಾಧ್ಯವಿಲ್ಲ. ಏಜೆನ್ಸಿಗಳಿಂದ ಆಟವಾಡುವ ಮೂಲಕ ದೇಶವು ಪ್ರಗತಿ ಹೊಂದುವುದಿಲ್ಲ ಎಂದರು.

2021-22ರ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ನಾಯಕ ಸಂಜಯ ಸಿಂಗ್ ಬಂಧನ ಕುರಿತು ಸುದ್ದಿಗಾರರ ಪ್ರಶ್ನೆಗೆ ಕೇಜ್ರಿವಾಲ್, ಅವರ ವಿರುದ್ಧ ಹೊರಿಸಲಾಗಿರುವ ಪ್ರತಿಯೊಂದೂ ಆರೋಪವು ಸುಳ್ಳು,ಎಲ್ಲ ಹೇಳಿಕೆಗಳೂ ಸುಳ್ಳು ಎಂದು ಉತ್ತರಿಸಿದರು.

ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ದಾಳಿ ನಡೆಸಿದ ಅವರು,ಅದು ಮೊದಲು ದಿಲ್ಲಿಯಲ್ಲಿ ಬಸ್ ಹಗರಣವನ್ನು ಆರೋಪಿಸಿತ್ತು. ನಂತರ ಕ್ಲಾಸ್ರೂಮ್ ಹಗರಣ,ವಿದ್ಯುತ್ ಹಗರಣ,ರಸ್ತೆ ನಿರ್ಮಾಣದಲ್ಲಿ ಮತ್ತು ನೀರು ಪೂರೈಕೆಯಲ್ಲಿ ಹಗರಣ;ಹೀಗೆ ಸಾಲು ಸಾಲು ಹಗರಣಗಳನ್ನು ಆರೋಪಿಸಿತ್ತು. ಆದರೆ ಏನೂ ಹೊರಬರಲಿಲ್ಲ ಎಂದರು.

ಈ ಮದ್ಯ ಹಗರಣ ಕೂಡ ಕಪೋಲಕಲ್ಪಿತವಾಗಿದೆ. ಯಾವುದೇ ಹಣದ ವಿನಿಮಯ ನಡೆದಿರಲಿಲ್ಲ ಮತ್ತು ವಿನಿಮಯ ನಡೆದಿದೆ ಎಂದು ನ್ಯಾಯಾಲಯದಲ್ಲಿ ತೋರಿಸಲು ತನಿಖಾ ಸಂಸ್ಥೆಗಳ ಬಳಿ ಸಾಕ್ಷ್ಯಾಧಾರಗಳೂ ಇಲ್ಲ. ಜನರನ್ನು ಈ ಏಜೆನ್ಸಿಗಳ ಜಾಲದಲ್ಲಿ ಸಿಲುಕಿಸುವುದು ಅವರ (ಬಿಜೆಪಿ) ಉದ್ದೇಶವಾಗಿದೆ. ಅವರು ಸ್ವತಃ ಕೆಲಸ ಮಾಡುವುದಿಲ್ಲ, ಬೇರೆಯವರು ಕೆಲಸ ಮಾಡಲೂ ಬಿಡುವುದಿಲ್ಲ ಎಂದು ಕಿಡಿ ಕಾರಿದ ಕೇಜ್ರಿವಾಲ್,ಮದ್ಯ ಹಗರಣ ನಡೆದೇ ಇಲ್ಲ ಎನ್ನುವುದು ಒಮ್ಮೆ ಸ್ಪಷ್ಟವಾದ ಬಳಿಕ ಅವರು ಇನ್ನೊಂದು ಹಗರಣದೊಂದಿಗೆ ಬರುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News