ರಸ್ತೆ ಅಪಘಾತಗಳಲ್ಲಿ ಸಾವುಗಳು:ಸಾರಿಗೆ ಸಚಿವಾಲಯ ಮತ್ತು ಎನ್‌ಸಿಆರ್‌ಬಿ ಅಂಕಿಅಂಶಗಳಲ್ಲಿ ವ್ಯತ್ಯಾಸ

Update: 2023-12-18 14:38 GMT

ಹೊಸದಿಲ್ಲಿ: 2022ರಲ್ಲಿ ದೇಶದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತಗಳಲ್ಲಿ ಸಾವುಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ) ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವಿರೋಧಾಭಾಸದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿವೆ. ಕೆಲವು ವರ್ಗಗಳಲ್ಲಿ ವ್ಯತ್ಯಾಸವು ಶೇ.42ರಷ್ಟು ಅಧಿಕವಾಗಿದೆ ಎಂದು thewire.in ವರದಿ ಮಾಡಿದೆ.

ಸಚಿವಾಲಯದ ವರದಿಯು 32,825 ಪಾದಚಾರಿಗಳ ಸಾವುಗಳನ್ನು ಸೂಚಿಸಿದ್ದು,ಎನ್‌ಬಿಆರ್‌ಬಿ ದತ್ತಾಂಶಗಳಿಗೆ ಹೋಲಿಸಿದರೆ ಶೇ.32ರಷ್ಟು ಹೆಚ್ಚಿದೆ. ಆದರೆ ಅಪಘಾತಕ್ಕೀಡಾದ ಟ್ರಕ್‌ಗಳಲ್ಲಿದ್ದ ಜನರಿಗೆ ಸಂಬಂಧಿಸಿದಂತೆ ಎನ್‌ಸಿಆರ್‌ಬಿಯು 15,087 ಸಾವುಗಳನ್ನು ವರದಿ ಮಾಡಿದ್ದು,ಇದು ಸಚಿವಾಲಯದ ದತ್ತಾಂಶಕ್ಕಿಂತ ಶೇ.42.5ರಷ್ಟು ಅಧಿಕವಾಗಿದೆ.

ಡೇಟಾ ಸಂಗ್ರಹಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳ ಸೀಮಿತ ತಿಳುವಳಿಕೆಯು ಈ ವ್ಯತ್ಯಾಸಗಳಿಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರು, ಜೀಪ್ ಮತ್ತು ಇತರ ಲಘು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಗಳಲ್ಲಿ ಸತ್ತವರ ಸಂಖ್ಯೆಯಲ್ಲಿಯೂ ಎನ್‌ಸಿಆರ್‌ಬಿ ಮತ್ತು ಸಚಿವಾಲಯದ ದತ್ತಾಂಶಗಳಲ್ಲಿ ವ್ಯತ್ಯಾಸವಿದ್ದು, ಇದು ಪ್ರಮಾಣಿತ ಡೇಟಾ ಸಂಗ್ರಹ ವ್ಯವಸ್ಥೆಯ ಅಗತ್ಯವನ್ನು ಎತ್ತಿ ತೋರಿಸಿದೆ.

ರಸ್ತೆ ಸಾರಿಗೆ ಸಚಿವಾಲಯವು ವಾರ್ಷಿಕ ಡೇಟಾ ಸಂಗ್ರಹಕ್ಕಾಗಿ 21 ಅಂತರ್-ಸಂಬಂಧಿತ ವಿಧಾನಗಳನ್ನು ಬಳಸುತ್ತದೆ, ಆದರೆ ಕ್ಷೇತ್ರ ಸಿಬ್ಬಂದಿಗಳ ಸೀಮಿತ ತಿಳುವಳಿಕೆಯಿಂದ ವ್ಯತ್ಯಾಸಗಳುಂಟಾಗುತ್ತವೆ. ಮೃತಪಟ್ಟವರು ಮತ್ತು ವಾಹನಗಳ ಎಣಿಕೆಯಲ್ಲಿ, ವಿಶೇಷವಾಗಿ ಪಾದಚಾರಿ ಘಟನೆಗಳಲ್ಲಿ ಅಸಮಂಜಸತೆಯಿದ್ದು, ಇದು ತಪ್ಪು ದತ್ತಾಂಶಗಳಿಗೆ ಕಾರಣವಾಗುತ್ತದೆ. ಎನ್‌ಸಿಆರ್‌ಬಿಯು ಸಿಸಿಟಿಎನ್‌ಎಸ್ (ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಆ್ಯಂಡ್ ಸಿಸ್ಟಮ್ಸ್)ನ ಕಚ್ಚಾ ಮಾಹಿತಿಗಳೊಂದಿಗೆ ವಿಭಿನ್ನ ಡೇಟಾ ಸಂಗ್ರಹ ಪದ್ಧತಿಗಳನ್ನು ಬಳಸುತ್ತದೆ ಎಂದು ಪಂಜಾಬ ಸರಕಾರದ ಸಂಚಾರ ಸಲಹೆಗಾರ ನವದೀಪ್ ಅಸಿಜಾ ಸುದ್ದಿಸಂಸ್ಥೆಗೆ ತಿಳಿಸಿದರು.

ಡೇಟಾ ಸಂಗ್ರಹವನ್ನು ಪ್ರಮಾಣೀಕರಿಸಲು ಸಾರಿಗೆ ಮತ್ತು ಗೃಹಸಚಿವಾಲಯಗಳ ನಡುವೆ ಸಹಯೋಗದ ಅಗತ್ಯವಿದೆ ಎಂದರು.

ವಿಶ್ವಸಂಸ್ಥೆಯ ಏಜೆನ್ಸಿಗಳು ಇನ್‌ಸ್ಟಿಟ್ಯೂಟ್ ಆಫ್ ಟ್ರಾಫಿಕ್ ಎಜ್ಯುಕೇಷನ್‌ನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ‘ಜಾಗತಿಕ ರಸ್ತೆ ಸುರಕ್ಷತಾ ಉಪಕ್ರಮ’ದಲ್ಲಿ ಅಪಘಾತ ಘಟನೆಗಳನ್ನು ದಾಖಲಿಸುಕೊಳ್ಳುವಲ್ಲಿ ಮತ್ತು ತನಿಖೆ ನಡೆಸುವಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡುವುದರ ಮಹತ್ವವನ್ನೂ ಪ್ರಮುಖವಾಗಿ ಪ್ರಸ್ತಾವಿಸಲಾಗಿತ್ತು.

ಸಮಸ್ಯೆಯನ್ನು ಒಪ್ಪಿಕೊಂಡಿರುವ ರಸ್ತೆ ಸಾರಿಗೆ ಕಾರ್ಯದರ್ಶಿ ಅನುರಾಗ ಜೈನ್ ಅವರು,ಹೊಸದಾಗಿ ಪರಿಚಯಿಸಲಾಗಿರುವ ಇ-ಡಿಟೇಲ್ಡ್ ಆ್ಯಕ್ಸಿಡೆಂಟ್ ರಿಪೋರ್ಟ್ (ಇ-ಡಿಎಆರ್) ವ್ಯವಸ್ಥೆಯು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಪೊಲಿಸ್ ಹಾಗೂ ಸಚಿವಾಲಯದ ಡೇಟಾಗಳ ನಡುವಿನ ಅನುರೂಪತೆಯು ಸುಧಾರಿಸಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News