ಪ್ರತಿಭಟನೆಯಲ್ಲಿ ಪೊಲೀಸ್ ದೌರ್ಜನ್ಯ ; ವಿಧಾನ ಸಭೆಯಲ್ಲಿ ಶಾಸಕರ ಆಕ್ರೋಶ

ಉಮರ್ ಅಬ್ದುಲ್ಲಾ | PC : PTI
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂವ್‌ನಲ್ಲಿ ಇಬ್ಬರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವಕರ ಸಂಬಂಧಿಕರು ಹಾಗೂ ಪ್ರತಿಭಟನಕಾರರಿಗೆ ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಒದೆಯುತ್ತಿರುವ ಹಾಗೂ ನಿಂದಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಇದು ಜಮ್ಮು ಕಾಶ್ಮೀರ ವಿಧಾನ ಸಭೆಯಲ್ಲಿ ಸೋಮವಾರ ಪ್ರತಿಭಟನೆ ಕಾರಣವಾಗಿದೆ.
ಘಟನೆ ಕುರಿತಂತೆ ಪಕ್ಷ ಬೇಧ ಮರೆತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಹಾಗೂ ಕಾಂಗ್ರೆಸ್‌ನ ಶಾಸಕರು ವಿಧಾನ ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ದಾಖಲಿಸುವ ಸಲುವಾಗಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್‌ನ ಶಾಸಕರಾದ ಜಾವೇದ್‌ಚೌಧರಿ, ಮಿಯಾನ್ ಮೆಹರ್ ಅಲಿ, ಜಾವೇದ್ ಮಿರ್ಚಲ್ ಹಾಗೂ ಝಾಫರ್ ಅಲಿ ಖಟಾನಾ ಸದನದ ಬಾವಿಯತ್ತ ನುಗ್ಗಲು ಪ್ರಯತ್ನಿಸಿದರು. ಆದರೆ, ಅವರನ್ನು ಮಾರ್ಷಲ್‌ಗಳು ತಡೆದರು.
‘‘ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ರಾಜ್ಯವೇ? ಪೊಲೀಸರು ಯಾರಿಗಾದರೂ ಗುಂಡು ಹಾರಿಸಲು, ಬಂಧಿಸಲು ಸಾಧ್ಯವೇ? ಪೊಲೀಸರಿಗೆ ಯಾವುದೇ ಕಾನೂನು ಇಲ್ಲವೇ?’’ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಶಾಸಕ ನಝೀರ್ ಗುರೇಝಿ ಪ್ರಶ್ನಿಸಿದರು.
ಈ ವಿಷಯವನ್ನು ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಪರಿಹರಿಸಲಿದ್ದಾರೆ ಎಂದು ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ಹೇಳಿಕೆಯ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಶಾಸಕರು ಸಮಾಧಾನಗೊಂಡರು.
ಕುಲ್ಗಾಂವ್‌ನಲ್ಲಿ ರವಿವಾರ ನಡೆದ ಪ್ರತಿಭಟನೆಯ ಸಂದರ್ಭ ಮಹಿಳೆಯರು ಸೇರಿದಂತೆ ಪ್ರತಿಭಟನಕಾರರಿಗೆ ಪೊಲೀಸರು ಒದೆಯುತ್ತಿರುವ ಹಾಗೂ ಥಳಿಸುತ್ತಿರುವ ವೀಡಿಯೊ ಜಮ್ಮು ಹಾಗೂ ಕಾಶ್ಮೀರದಲ್ಲಿ ವೈರಲ್ ಆಗಿದ್ದು, ಪೊಲೀಸರರ ವರ್ತನೆ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಹೋರಾಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಮೂವರು ಯುವಕರಾದ ಮುಹಮ್ಮದ್ ಸೌಕತ್ ಬಜಾಡ್, ರಿಯಾಜ್ ಅಹ್ಮದ್ ಬಜಾಡ್‌ಹಾಗೂ ಮುಕ್ತಾರ್ ಅಹ್ಮದ್ ಕುಲ್ಗಾಂವ್ ನ ಮಹ್ ಅಸ್ಮು ಜಿ ಪ್ರದೇಶದಿಂದ ಫೆಬ್ರವರಿ 13ರಿಂದ ನಾಪತ್ತೆಯಾಗಿದ್ದರು. ಇಬ್ಬರು ಸಹೋದರರಾದ ಶೌಕತ್ ಹಾಗೂ ರಿಯಾಝ್ ಅವರು ರಜೌರಿಯ ಚಾಟಾ ದೂಂಡಾದವರು. ಅವರ ಮೃತದೇಹಗಳು ವೈಷ್ಣವ್ ನಾಲಾದಲ್ಲಿ ಕಳೆದ ವಾರ ಪತ್ತೆಯಾಗಿತ್ತು. ಮೂರನೇ ಯುವಕ ಇನ್ನೂ ಕೂಡ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ಮೂರನೇ ಯುವಕನನ್ನು ಪತ್ತೆ ಹಚ್ಚಲು ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿದೆ.
ಪತ್ತೆಯಾದ ಇಬ್ಬರು ಯುವಕರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಇದು ಮುಳುಗಿ ಸಾವನ್ನಪ್ಪಿದ ಪ್ರಕರಣ ಎಂದು ಶಂಕಿಸಿದ್ದಾರೆ.
ಆದರೆ, ಗುಜ್ಜಾರ್ ನಾಯಕ ತಾಲಿಬ್ ಹುಸೈನ್ ಅವರು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ‘‘ಯುವಕರು ನಾಪತ್ತೆಯಾದ ಸಮಯ ಕಾಶ್ಮೀರದ ಹೆಚ್ಚಿನ ನೀರಿನಾಗರಗಳು ಬತ್ತಿದ್ದವು’’ ಎಂದು ಅವರು ಹೇಳಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.