ದಿಲ್ಲಿ ಚುನಾವಣೆ | ಎಲ್ಲಾ 70 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ

Update: 2025-01-01 14:58 GMT

ಮಾಯಾವತಿ | PC : PTI 

ಹೊಸದಿಲ್ಲಿ : ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (BSP)ವು ಎಲ್ಲಾ 70 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅದು ಜನವರಿ ಮಧ್ಯಭಾಗದ ವೇಳೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ರಾಜ್ಯವನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಎಲ್ಲಾ ವಲಯಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಕ್ಷದ ಅಧಿಕಾರಿಯೊಬ್ಬರು ತಿಳಿಸಿದರು.

ಫೆಬ್ರವರಿಯಲ್ಲಿ ನಡೆಯಲು ನಿಗದಿಯಾಗಿರುವ ದಿಲ್ಲಿ ವಿಧಾನಸಭಾ ಚುನಾವಣೆಯು ‘‘ಆಸಕ್ತಿದಾಯಕ ಮತ್ತು ಸವಾಲಿನದ್ದಾಗಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಅವರು ಹೇಳಿದರು.

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರತಿ ವಲಯಕ್ಕೆ ಸಮನ್ವಯಕಾರರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

‘‘ಈ ಕೇಂದ್ರೀಯ ಸಮನ್ವಯಕಾರರು ತಮ್ಮ ಶಿಫಾರಸುಗಳನ್ನು ಅಂತಿಮಗೊಳಿಸಿ ಬೆಹನ್ಜೀ (ಪಕ್ಷದ ಮುಖ್ಯಸ್ಥೆ ಮಾಯಾವತಿ) ಅವರಿಗೆ ಕಳುಹಿಸುತ್ತಾರೆ. ಈ ಶಿಫಾರಸುಗಳ ಆಧಾರದಲ್ಲಿ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು’’ ಎಂದರು.

ಅಭ್ಯರ್ಥಿಗಳ ಪಟ್ಟಿಯು ಜನವರಿ 15ರೊಳಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಪಕ್ಷದ ಅಧಿಕಾರಿ ತಿಳಿಸಿದರು.

2020ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯು ಎಲ್ಲಾ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಕ್ಷೇತ್ರದಲ್ಲೂ ಗೆಲ್ಲಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಅದು ಕೇವಲ 0.71 ಶೇಕಡ ಮತಗಳನ್ನು ಪಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News