ನೂತನ ನ್ಯಾಯ ಸಂಹಿತೆ | ಮೊದಲ ಪ್ರಕರಣದಲ್ಲೇ ಗೊಂದಲ
ಹೊಸದಿಲ್ಲಿ : ದಿಲ್ಲಿ ಪೊಲೀಸರು ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತಾದಡಿ ಮೊದಲ ಪ್ರಕರಣವನ್ನು ಸೋಮವಾರ ಬೀದಿ ಬದಿ ವ್ಯಾಪಾರಿಯೋರ್ವನ ವಿರುದ್ಧ ದಾಖಲಿಸಿಕೊಂಡಿದ್ದರಾದರೂ ಅನಂತರ ಈ ಎಫ್‌ಐಆರ್‌ಅನ್ನು ರದ್ದುಪಡಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರು ತನಿಖೆಯ ಬಳಿಕ ಬೀದಿ ವ್ಯಾಪಾರಿಯ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಸದಿಲ್ಲಿ ರೈಲ್ವೆ ಜಂಕ್ಷನ್‌ನಲ್ಲಿ ಪಾದಚಾರಿ ಮೇಲ್ಸೇತುವೆಯಲ್ಲಿ ನೀರಿನ ಬಾಟ್ಲಿಗಳು ಮತ್ತು ಗುಟ್ಕಾ ಮಾರಾಟ ಮಾಡುವ ಮೂಲಕ ಜನರ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದ್ದ ಆರೋಪದಲ್ಲಿ ಬೀದಿ ಬದಿ ವ್ಯಾಪಾರಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಧ್ಯಪ್ರದೇಶದ ಗ್ವಾಲೀಯರ್‌ನಲ್ಲಿ ರವಿವಾರ ಮಧ್ಯರಾತ್ರಿ 12ರ ವೇಳೆಗೆ ಬೈಕ್ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಇದು ಬಿಎನ್‌ಎಸ್ ಕಾನೂನಿನಡಿ ದಾಖಲಾದ ಮೊದಲ ಪ್ರಕರಣವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.