ಪ್ರತ್ಯೇಕ ಆಡಳಿತಕ್ಕೆ ಬೇಡಿಕೆ : ನಾಗಾಲ್ಯಾಂಡಿನ ಆರು ಜಿಲ್ಲೆಗಳಲ್ಲಿ ಶೂನ್ಯ ಮತದಾನ

Update: 2024-04-19 15:38 GMT

PC : livemint.com

ಹೊಸದಿಲ್ಲಿ: ದೇಶದಲ್ಲಿ ಶುಕ್ರವಾರ ಮೊದಲ ಹಂತದ ಲೋಕಸಭಾ ಚುನಾವಣೆಗಳು ನಡೆದಿದ್ದು,ನಾಗಾಲ್ಯಾಂಡಿನ ಆರು ಜಿಲ್ಲೆಗಳಲ್ಲಿ ಹೆಚ್ಚುಕಡಿಮೆ ಶೂನ್ಯ ಮತದಾನ ದಾಖಲಾಗಿದೆ. ಹೆಚ್ಚಿನ ಆರ್ಥಿಕ ಸ್ವಾಯತ್ತತೆಯೊಂದಿಗೆ ಪ್ರತ್ಯೇಕ ಆಡಳಿತಕ್ಕಾಗಿ ಆಗ್ರಹಿಸುತ್ತಿರುವ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್(ಇಎನ್ಪಿಒ) ‘ಸಾರ್ವಜನಿಕ ತುರ್ತು ಪರಿಸ್ಥಿತಿ ’ಯನ್ನು ಘೋಷಿಸಿ ಈ ಚುನಾವಣೆಯನ್ನು ಬಹಿಷ್ಕರಿಸುವಂತೆ ಸ್ಥಳೀಯರಿಗೆ ಕರೆ ನೀಡಿತ್ತು.

ನಾಗಾಲ್ಯಾಂಡಿನ ಮುಖ್ಯ ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಐಪಿಸಿಯ ಕಲಂ 171ಸಿ ಅಡಿ ಕ್ರಮವನ್ನು ಏಕೆ ಜರುಗಿಸಬಾರದು ಎನ್ನುವುದಕ್ಕೆ ಕಾರಣವನ್ನು ಕೇಳಿ ಇಎನ್ಪಿಒಗೆ ಶೋಕಾಸ್ ನೋಟಿಸ್ ಹೊರಡಿಸಿದ್ದಾರೆ.

ನೋಟಿಸ್ಗೆ ಪ್ರತಿಕ್ರಿಯಿಸಿರುವ ಇಎನ್ಪಿಒ, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಪೂರ್ವ ನಾಗಾಲ್ಯಾಂಡ್ ಪ್ರದೇಶದಲ್ಲಿ ಪ್ರಸ್ತುತ ಸಾರ್ವಜನಿಕ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಮತ್ತು ಇದರ ಜನರ ಸ್ವಯಂಪ್ರೇರಿತ ಕ್ರಮವಾಗಿದೆ ಎಂದು ತಿಳಿಸಿದೆ.

ಇಎನ್ಪಿಒ ಮಾ.30ರಂದು 20 ಶಾಸಕರು ಮತ್ತು ಇತರ ಸಂಘಟನೆಗೊಂದಿಗೆ ಸುದೀರ್ಘ ಸಭೆ ನಡೆಸಿತ್ತು ಮತ್ತು ಚುನಾವಣೆಯಿಂದ ಸಂಪೂರ್ಣವಾಗಿ ದೂರವಿರುವ ತನ್ನ ನಿರ್ಧಾರವನ್ನು ಪುನರುಚ್ಚರಿಸಿತ್ತು. 20 ಶಾಸಕರನ್ನೊಳಗೊಂಡ ಪೂರ್ವ ನಾಗಾಲ್ಯಾಂಡ್ ಶಾಸಕರ ಒಕ್ಕೂಟವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇಎನ್ಪಿಒಗೆ ಕೇಳಿಕೊಂಡಿತ್ತು.

ಇಎನ್ಪಿಒ ಮರುದಿನ ಚುನಾವಣೆಯನ್ನು ಬಹಿಷ್ಕರಿಸುವ ತನ್ನ ನಿರ್ಧಾರವನ್ನು ಚುನಾವಣಾ ಆಯೋಗಕ್ಕೆ ತಿಳಿಸಿತ್ತು.

ಪ್ರದೇಶದಲ್ಲಿಯ ಏಳು ನಾಗಾ ಬುಡಕಟ್ಟುಗಳ ಅತ್ಯುಚ್ಛ ಸಂಘಟನೆಯಾಗಿರುವ ಇಎನ್ಪಿಒ ಮಾ.8ರಂದು ‘ಸಾರ್ವಜನಿಕ ತುರ್ತು ಪರಿಸ್ಥಿತಿ ’ಯನ್ನು ಘೋಷಿಸಿತ್ತು. ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೂ ಅದು ಅನುಮತಿ ನೀಡಿರಲಿಲ್ಲ.

ಕಳೆದ ವರ್ಷ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಇಎನ್ಪಿಒ ಬಹಿಷ್ಕಾರ ಕರೆಯನ್ನು ನೀಡಿತ್ತು, ಆದರೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಂದ ಭರವಸೆಯ ಬಳಿಕ ಬಹಿಷ್ಕಾರ ಕರೆಯನ್ನು ಹಿಂದೆಗೆದುಕೊಳ್ಳಲಾಗಿತ್ತು.

ನಾಗಾಲ್ಯಾಂಡಿನ ಏಕೈಕ ಲೋಕಸಭಾ ಕ್ಷೇತ್ರವನ್ನು 2018ರ ಉಪಚುನಾವಣೆಯ ಬಳಿಕ ಬಿಜೆಪಿಯ ಮಿತ್ರಪಕ್ಷ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ತೊಖೆಹೋ ಎಪ್ತೋಮಿ ಅವರು ಪ್ರತಿನಿಧಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News