ಮಹಿಳಾ ಮೀಸಲಾತಿ ಕಾನೂನಿನ ಒಂದು ಭಾಗವನ್ನು ರದ್ದುಗೊಳಿಸುವುದು ನ್ಯಾಯಾಲಯಕ್ಕೆ ಕಷ್ಟ: ಸುಪ್ರೀಂ ಕೋರ್ಟ್

Update: 2023-11-03 13:20 GMT

Photo- PTI

ಹೊಸದಿಲ್ಲಿ: ಜನಗಣತಿಯ ಬಳಿಕ ಜಾರಿಗೊಳ್ಳಲಿದೆ ಎಂದು ಹೇಳಲಾಗಿರುವ ಮಹಿಳಾ ಮೀಸಲಾತಿ ಕಾನೂನಿನ ಒಂದು ಭಾಗವನ್ನು ತೊಡೆದುಹಾಕುವುದು ತನಗೆ ಅತ್ಯಂತ ಕಷ್ಟವಾಗಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು,ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ನ್ನು ಹೊರಡಿಸಲು ನಿರಾಕರಿಸಿತು.

ಈ ವಿಷಯದ ಕುರಿತು ಸಲ್ಲಿಸಲಾಗಿರುವ ಅರ್ಜಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿದೆ ಮತ್ತು ಅದರೊಂದಿಗೆ ಠಾಕೂರ್ ಅರ್ಜಿಯನ್ನು ನ.22ರಂದು ತಾನು ಕೈಗೆತ್ತಿಕೊಳ್ಳುವುದಾಗಿ ಪೀಠವು ತಿಳಿಸಿತು.

ಠಾಕೂರ್ ಪರ ಹಿರಿಯ ವಕೀಲ ವಿಕಾಸ ಸಿಂಗ್ ಅವರ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಪೀಠವು, ಸರಕಾರವು ತೆಗೆದುಕೊಂಡಿರುವ ಕ್ರಮವು ತುಂಬ ಒಳ್ಳೆಯ ಹೆಜ್ಜೆಯಾಗಿದೆ ಎಂದು ಹೇಳಿತು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ದತ್ತಾಂಶ ಸಂಗ್ರಹಕ್ಕೆ ಜನಗಣತಿ ಅಗತ್ಯವಾಗಿದೆ ಎನ್ನುವುದು ಅರ್ಥವಾಗುವಂಥದ್ದು, ಆದರೆ ಮಹಿಳಾ ಮೀಸಲಾತಿ ವಿಷಯದಲ್ಲಿ ಜನಗಣತಿಯ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಸಿಂಗ್ ಪ್ರಶ್ನಿಸಿದ್ದರು.

ಜನಗಣತಿಯ ಬಳಿಕ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲಾಗುವುದು ಎಂಬ ಕಾನೂನಿನಲ್ಲಿಯ ಭಾಗವು ನಿರಂಕುಶವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು ಎಂಬ ಸಿಂಗ್ ಅಹವಾಲಿಗೆ ಪ್ರತಿಕ್ರಿಯಿಸಿದ ಪೀಠವು, ‘ಅದನ್ನು ಮಾಡಲು ನ್ಯಾಯಾಲಯಕ್ಕೆ ಅತ್ಯಂತ ಕಷ್ಟವಾಗುತ್ತದೆ. ನಿಮ್ಮ ವಾದವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಮಹಿಳಾ ಮೀಸಲಾತಿಗೆ ಜನಗಣತಿ ಅಗತ್ಯವಿಲ್ಲ ಎಂದು ನೀವು ಹೇಳುತ್ತಿದ್ದೀರಿ, ಆದರೆ ಇತರ ಹಲವಾರು ವಿಷಯಗಳೂ ಇವೆ. ಸ್ಥಾನಗಳನ್ನು ಮೊದಲು ಮೀಸಲಿರಿಸಬೇಕು, ಇತರ ಕಾರ್ಯಗಳನ್ನು ಪೂರೈಸಬೇಕು’ ಎಂದು ತಿಳಿಸಿತು.

ಬಳಿಕ ಸಿಂಗ್ ನೋಟಿಸ್‌ನ್ನು ಹೊರಡಿಸುವಂತೆ ಮತ್ತು ಬಾಕಿಯಿರುವ ಅರ್ಜಿಯೊಂದಿಗೆ ತನ್ನ ಅರ್ಜಿಯನ್ನು ಪಟ್ಟಿ ಮಾಡುವಂತೆ ಕೇಳಿಕೊಂಡರು.

ತಾನು ಅರ್ಜಿಯನ್ನು ವಜಾಗೊಳಿಸುತ್ತಿಲ್ಲ, ಆದರೆ ನೋಟಿಸನ್ನು ಹೊರಡಿಸುವುದಿಲ್ಲ ಮತ್ತು ಅದನ್ನು ಬಾಕಿಯುಳಿದಿರುವ ವಿಷಯದೊಂದಿಗೆ ಸೇರಿಸುತ್ತೇನೆ, ಅಷ್ಟೇ ಎಂದು ಪೀಠವು ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News