ಬಿಜೆಪಿ ನಾಯಕನ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ಇಬ್ಬರು ವೃದ್ಧ ದಲಿತ ರೈತರಿಗೆ ಈ.ಡಿ. ಸಮನ್ಸ್
ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರು ನಿವಾಸಿಗಳಾಗಿರುವ ಕನ್ನೈಯನ್ ಮತ್ತು ಅವರ ಸೋದರ ಕೃಷ್ಣನ್ ಅವರಿಗೆ ಜಾರಿ ನಿರ್ದೇಶನಾಲಯ (ಈ.ಡಿ.)ವು 2023,ಜುಲೈನಲ್ಲಿ ಸಮನ್ಸ್ ಜಾರಿಗೊಳಿಸಿದೆ. ದಲಿತ ಸಮುದಾಯಕ್ಕೆ ಸೇರಿದ ಈ ಸೋದರರ ವಯಸ್ಸು 70 ವರ್ಷ ದಾಟಿದ್ದು,ವೃತ್ತಿಯಲ್ಲಿ ರೈತರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಪ್ರಕರಣಗಳ ತನಿಖೆ ನಡೆಸುವ ಈ.ಡಿ. ಈ ರೈತರಿಗೆ ಸಮನ್ಸ್ ಜಾರಿಗೊಳಿಸಿದ ಬಳಿಕ ವಿವಾದದಲ್ಲಿ ಸಿಲುಕಿಕೊಂಡಿದೆ ಎಂದು thenewsminute.com ವರದಿ ಮಾಡಿದೆ.
ತಮ್ಮ ಸ್ವಗ್ರಾಮ ರಾಮನಾಯ್ಕನಪಾಳ್ಯಮ್ ನಲ್ಲಿ 6.5 ಎಕರೆ ಕೃಷಿಭೂಮಿಯನ್ನು ಹೊಂದಿರುವ ಈ ಸೋದರರಿಗೆ ಈ.ಡಿ. ಏಕೆ ಸಮನ್ಸ್ ಜಾರಿಗೊಳಿಸಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಸಮನ್ಸ್ ರವಾನಿಸಿದ್ದ ಲಕೋಟೆಯ ಮೇಲೆ ಅವರ ಜಾತಿಯನ್ನು ʼಹಿಂದು ಪಲ್ಲರ್ಗಳುʼ ಎಂದು ಉಲ್ಲೇಖಿಸಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಮಾಸಿಕ 1,000 ರೂ.ಗಳ ಪಿಂಚಣಿಯಲ್ಲಿ ಬದುಕು ಸಾಗಿಸುತ್ತಿರುವ ಈ ದಲಿತ ರೈತರು ಭೂವಿವಾದ ಪ್ರಕರಣವೊಂದನ್ನು ದಾಖಲಿಸಿದ್ದು, ಸ್ಥಳೀಯ ಬಿಜೆಪಿ ನಾಯಕನೋರ್ವ ತಮ್ಮ ಭೂಮಿಯನ್ನು ಅಕ್ರಮವಾಗಿ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ.ಡಿ. ಅವರ ಬೆನ್ನು ಬಿದ್ದಿದೆ ಎಂದು ಆರೋಪಿಸಲಾಗಿದೆ.
ಈ.ಡಿ. ಸಹಾಯಕ ನಿರ್ದೇಶಕ ರಿತೇಶ್ ಕುಮಾರ್ ಅವರು 2023, ಜೂ.26ರಂದು ಕನೈಯನ್ ಮತ್ತು ಕೃಷ್ಣನ್ ಅವರಿಗೆ ಹೊರಡಿಸಿದ ಸಮನ್ಸ್ ನಲ್ಲಿ ಪಾನ್ ಕಾರ್ಡ್, ಆಧಾರ ಕಾರ್ಡ್, ಮತದಾರರ ಗುರುತು ಚೀಟಿ, ತಮ್ಮ ಮತ್ತು ಕುಟುಂಬ ಸದಸ್ಯರ ತೆರಿಗೆ ರಿಟರ್ನ್ ಗಳ ಪ್ರತಿಗಳು, ಹಣಕಾಸು ವ್ಯವಹಾರಗಳು, ಕೃಷಿ ಉತ್ಪನ್ನ, ಸ್ಥಿರಾಸ್ತಿಗಳ ವಿವರಗಳು ಇತ್ಯಾದಿ ದಾಖಲೆಗಳೊಂದಿಗೆ 2023, ಜು.5ರಂದು ತನ್ನೆದುರು ಹಾಜರಾಗುವಂತೆ ಸೂಚಿಸಿದ್ದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕನ್ನೈಯನ್ ಮತ್ತು ಕೃಷ್ಣನ್ ಪರ ನ್ಯಾಯವಾದಿ ಪರ್ವಿನಾ ಅವರು, ಸಮನ್ಸ್ ನಲ್ಲಿ ಪ್ರಕರಣದ ಕುರಿತು ಯಾವುದೇ ಉಲ್ಲೇಖವಿಲ್ಲ. ಈ ಸೋದರರಿಗೆ ತಮ್ಮ ವಿರುದ್ಧದ ಪ್ರಕರಣ ಏನು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸೂಕ್ತ ದಾಖಲೆಗಳೊಂದಿಗೆ ಈ.ಡಿ. ಮುಂದೆ ಹಾಜರಾಗುವಂತೆ ಸೂಚನೆ ಬಿಟ್ಟರೆ ಇನ್ನೇನನ್ನೂ ಸಮನ್ಸ್ ನಲ್ಲಿ ಉಲ್ಲೇಖಿಸಿಲ್ಲ. ಈ ರೈತರು ತೊಡಗಿಕೊಂಡಿರುವ ಏಕೈಕ ಪ್ರಕರಣವು ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ರಿಂದ ಅಕ್ರಮ ಭೂಕಬಳಿಗೆ ಪ್ರಯತ್ನಕ್ಕೆ ಸಂಬಂಧಿಸಿದೆ ಎಂದು ಹೇಳಿದರು.
ಕೃಷ್ಣನ್ ದೂರಿನ ಆಧಾರದಲ್ಲಿ 2020ರಲ್ಲಿ ಗುಣಶೇಖರರನ್ನು ಬಂಧಿಸಲಾಗಿತ್ತು. ಕೃಷ್ಣನ್ ಮತ್ತು ಗುಣಶೇಖರನ್ ನಡುವಿನ ಭೂವಿವಾದಕ್ಕೆ ಸಂಬಂಧಿಸಿದ ಸಿವಿಲ್ ಪ್ರಕರಣವು ಅತ್ತೂರು ನ್ಯಾಯಾಲಯದಲ್ಲಿ ಬಾಕಿಯಿದೆ.
ಈ ಹಿನ್ನೆಲೆಯಲ್ಲಿ ಈ.ಡಿ.ರೈತರಿಗೆ ಸಮನ್ಸ್ ಜಾರಿಗೊಳಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
“ಜು.5ರಂದು ನಾವು ಎಲ್ಲ ದಾಖಲೆಗಳೊಂದಿಗೆ ನಮ್ಮ ವಕೀಲರ ಜೊತೆ ಈ.ಡಿ ಕಚೇರಿಗೆ ತೆರಳಿದ್ದೆವು. ಮತ್ತೊಮ್ಮೆ ಹಾಜರಾಗುವಂತೆ ಅವರು ತಿಳಿಸಿದ್ದರು. ನಾವು ಹೇಗೋ ಬದುಕುತ್ತಿದ್ದೇವೆ, ಯಾರಾದರೂ ನಮ್ಮ ಮೇಲೆ ಅಕ್ರಮ ಸಂಪತ್ತಿನ ಆರೋಪ ಹೊರಿಸಲು ಹೇಗೆ ಸಾಧ್ಯ ಎಂದು ನಾವು ಅವರನ್ನು ಕೇಳಿದ್ದೆವು” ಎಂದು ಕೃಷ್ಣನ್ ಸುದ್ದಿಸಂಸ್ಥೆಗೆ ತಿಳಿಸಿದರು.
ಈ.ಡಿ. ಕಚೇರಿಯಲ್ಲಿ ಈ ರೈತರಿಗೆ ಇಂಗ್ಲಿಷ್ ನಲ್ಲಿದ್ದ ನಮೂನೆಯೊಂದನ್ನು ನೀಡಿ ಅದನ್ನು ತುಂಬುವಂತೆ ತಿಳಿಸಲಾಗಿದ್ದು, ವಕೀಲರು ಆ ಕೆಲಸವನ್ನು ಮಾಡಿದ್ದರು. ಹಿಂದೆ ಫೆರಾ ಅಥವಾ ಫೆಮಾ ಉಲ್ಲಂಘನೆಗಾಗಿ ಪ್ರಕರಣ ದಾಖಲಾಗಿತ್ತೇ ಅಥವಾ ಕಸ್ಟಮ್ಸ್, ಡಿಆರ್ಐ ಮತ್ತು ಆದಾಯ ತೆರಿಗೆ ಕಾಯ್ದೆಗಳಡಿ ಯಾವುದಾದರೂ ಅಪರಾಧ ದಾಖಲಾಗಿತ್ತೇ ಇತ್ಯಾದಿ ಪ್ರಶ್ನೆಗಳನ್ನು ಈ ನಮೂನೆಯಲ್ಲಿ ಕೇಳಲಾಗಿತ್ತು. ನಮೂನೆಯಲ್ಲಿ ಆದಾಯ ಕುರಿತು ಪ್ರಶ್ನೆಗೆ ಈ ರೈತರು ತಾವು ತಮಿಳುನಾಡು ಸರಕಾರದಿಂದ 1,000ರೂ.ಗಳ ವೃದ್ಧಾಪ್ಯ ವೇತನವನ್ನು ಮಾತ್ರ ಸ್ವೀಕರಿಸುತ್ತಿದ್ದೇವೆ, ಅದನ್ನು ಬಿಟ್ಟು ಇತರ ಯಾವುದೇ ಆದಾಯ ಇಲ್ಲ ಎಂದು ಉತ್ತರಿಸಿದ್ದರು.
ಭೂ ಸಮಸ್ಯೆಗಳಿಂದಾಗಿ ಕನ್ನೈಯನ್ ಮತ್ತು ಕೃಷ್ಣನ್ ಕಳೆದ ನಾಲ್ಕು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ಬದುಕಿಗಾಗಿ ಸರಕಾರದ 1,000 ರೂ. ಮಾಸಿಕ ಪಿಂಚಣಿ ಮತ್ತು ಉಚಿತ ಪಡಿತರವನ್ನೇ ಅವರು ನಂಬಿಕೊಂಡಿದ್ದಾರೆ ಎಂದು ಪರ್ವಿನಾ ತಿಳಿಸಿದರು.
ಈ ರೈತರ ಬ್ಯಾಂಕ್ ಖಾತೆಯಲ್ಲಿ ಕೇವಲ 450 ರೂ. ಇದ್ದು, ಚೆನ್ನೈನಲ್ಲಿಯ ಈ.ಡಿ. ಕಚೇರಿಗೆ ಭೇಟಿ ನೀಡಲು ವಾಹನ ಬಾಡಿಗೆ ಮತ್ತು ಇತರ ವೆಚ್ಚಗಳಿಗಾಗಿ 50,000 ರೂ.ಸಾಲ ಮಾಡಿದ್ದರು. ಈ ಸಾಲವನ್ನು ಅವರು ಈಗ ಮರುಪಾವತಿಸಬೇಕಿದೆ ಎಂದರು.
ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿರುವ ಗುಣಶೇಖರ್, ತಮಿಳುನಾಡು ಪೋಲಿಸರು ಈ.ಡಿ. ಮತ್ತು ಬಿಜೆಪಿ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗುಣಶೇಖರ್ ರನ್ನು ಸಮರ್ಥಿಸಿಕೊಂಡಿರುವ ಸೇಲಂ ಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ.ಷಣ್ಮುಗನಾಥನ್ ಅವರು, ದೂರು ದಾಖಲಿಸಿದ್ದು ಯಾರು ಮತ್ತು ಈ.ಡಿ. ಈ ರೈತರಿಗೆ ಸಮನ್ಸ್ ಜಾರಿಗೊಳಿಸಿದ್ದು ಎಂಬ ಬಗ್ಗೆ ತಾವು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.