ಚುನಾವಣಾ ಬಾಂಡ್ ಯೋಜನೆ: ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದ ಬಳಿಕ 1,577 ಕೋಟಿ ರೂ.ಗೂ ಹೆಚ್ಚಿನ ಬಾಂಡ್‌ಗಳ ಮಾರಾಟ

Update: 2024-03-22 09:18 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು 2023 ನವಂಬರ್‌ನಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿದ ಬಳಿಕವೂ 1,577 ಕೋ.ರೂ.ಮೌಲ್ಯದ ಬಾಂಡ್‌ಗಳನ್ನು ಮಾರಾಟ ಮಾಡಲಾಗಿತ್ತು. ಆರ್‌ಟಿಐ ಕಾರ್ಯಕರ್ತ ಕಮೊಡೋರ್ ಲೋಕೇಶ್ ಬಾತ್ರಾ ಅವರು ಕಾಯ್ದೆಯಡಿ ಪಡೆದುಕೊಂಡಿರುವ ಉತ್ತರದಲ್ಲಿ ಇದು ಬಹಿರಂಗಗೊಂಡಿದೆ ಎಂದು thewire.in ವರದಿ ಮಾಡಿದೆ.

2023,ನ.2ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಫೆ.15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು. ತೀರ್ಪು ಕಾಯ್ದಿರಿಸಿದ ಎರಡು ದಿನಗಳ ಬಳಿಕ ನರೇಂದ್ರ ಮೋದಿ ಸರಕಾರವು 29ನೇ ಕಂತಿನ ಚುನಾವಣಾ ಬಾಂಡ್‌ಗಳ ಮಾರಾಟವನ್ನು ಪ್ರಕಟಿಸಿತ್ತು.

ನ.6ರಿಂದ 20ರವರೆಗಿನ ಅವಧಿಯಲ್ಲಿ 1000 ಕೋಟಿ ರೂ.ಗೂ ಅಧಿಕ ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟಗೊಂಡಿದ್ದವು. ಜ.2ರಿಂದ 11ರವರೆಗಿನ ಮುಂದಿನ ಕಂತಿನಲ್ಲಿ 570 ಕೋಟಿ ರೂ.ಗಳ ಬಾಂಡ್‌ಗಳು ಮಾರಾಟಗೊಂಡಿದ್ದವು.

29ನೇ ಕಂತಿನಲ್ಲಿ ಮಾರಾಟಗೊಂಡಿದ್ದ ಸುಮಾರು ಶೇ.99ರಷ್ಟು ಮತ್ತು 30ನೇ ಹಂತದಲ್ಲಿಯ ಶೇ.94ರಷ್ಟು ಬಾಂಡ್‌ಗಳು ಒಂದು ಕೋಟಿ ರೂ.ಮುಖಬೆಲೆಯನ್ನು ಹೊಂದಿದ್ದವು.

2024ರೊಂದರಲ್ಲೇ ಮೋದಿ ಸರಕಾರವು ತಲಾ ಒಂದು ಕೋಟಿ ರೂ.ಮುಖಬೆಲೆಯ 8,350 ಚುನಾವಣಾ ಬಾಂಡ್‌ಗಳನ್ನೂ ಮುದ್ರಿಸಿತ್ತು.

ಚುನಾವಣಾ ಬಾಂಡ್‌ಗಳ ಮುದ್ರಣ ಮತ್ತು ನಿರ್ವಹಣಾ ವೆಚ್ಚವನ್ನು ತೆರಿಗೆದಾರರರೇ ಭರಿಸುತ್ತಾರೆ,ದಾನಿಗಳು ಅಥವಾ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಈ ಹಿಂದೆ ಬಾತ್ರಾ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಲಭಿಸಿದ್ದ ಉತ್ತರವು ತೋರಿಸಿತ್ತು.

ಚುನಾವಣಾ ಆಯೋಗವು ಪ್ರಕಟಿಸಿರುವ ದತ್ತಾಂಶಗಳಂತೆ ಬಿಜೆಪಿಯು 2018ರಿಂದ ಚುನಾವಣಾ ಬಾಂಡ್‌ಗಳ ರೂಪದಲ್ಲಿ 8,251.8 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಈ ಅವಧಿಯಲ್ಲಿ ಒಟ್ಟು 16,518 ಕೋಟಿ ರೂ.ಗಳ ಬಾಂಡ್‌ಗಳನ್ನು ಮಾರಾಟ ಮಾಡಲಾಗಿತ್ತು. ಅಂದರೆ ಬಿಜೆಪಿ ಮಾರಾಟಗೊಂಡಿದ್ದ ಎಲ್ಲ ಬಾಂಡ್‌ಗಳ ಸುಮಾರು ಶೇ.50ರಷ್ಟನ್ನು ನಗದೀಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News