ಎಲ್ಗಾರ್ ಪರಿಷದ್ ಪ್ರಕರಣ : ಹನಿ ಬಾಬು ಜಾಮೀನು ಅರ್ಜಿ ಕುರಿತು ಮಹಾರಾಷ್ಟ್ರ ಸರಕಾರ, ಎನ್ಐಎ ಪ್ರತಿಕ್ರಿಯೆ ಕೋರಿದ ಸುಪ್ರೀಂ
ಹೊಸದಿಲ್ಲಿ : ಬಾಂಬೆ ಉಚ್ಛ ನ್ಯಾಯಾಲಯ ತನ್ನ ಜಾಮೀನು ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿ ಹನಿ ಬಾಬು ಸಲ್ಲಿಸಿದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ಮಹಾರಾಷ್ಟ್ರ ಸರಕಾರ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಪ್ರತಿಕ್ರಿಯೆ ಕೋರಿದೆ.
ಹನಿ ಬಾಬು ಸಲ್ಲಿಸಿದ ಮೇಲ್ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ಸಂಜಯ್ ಕರೋಲ್ ಅವರನ್ನು ಒಳಗೊಂಡ ಪೀಠ ಮಹಾರಾಷ್ಟ್ರ ಸರಕಾರ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ನೋಟಿಸು ಜಾರಿ ಮಾಡಿದೆ ಹಾಗೂ ಮೂರು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
2022 ಸೆಪ್ಟಂಬರ್ 19ರಂದು ಉಚ್ಛ ನ್ಯಾಯಾಲಯ ಹನಿ ಬಾಬು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕರ ಸೂಚನೆಯಂತೆ ಮಾವೋವಾದಿ ಚಟುವಟಿಕೆಗಳು ಹಾಗೂ ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಹನಿ ಬಾಬು ಕೂಡ ಸಂಚು ನಡೆಸಿದ್ದಾರೆ ಎಂದು ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಸಿದೆ.
ಈ ಪ್ರಕರಣದಲ್ಲಿ ಹನಿ ಬಾಬು ಅವರನ್ನು 2020 ಜುಲೈನಲ್ಲಿ ಬಂಧಿಸಲಾಗಿತ್ತು. ಇವರನ್ನು ಪ್ರಸಕ್ತ ನವಿ ಮುಂಬೈಯ ತಲೋಜಾ ಕಾರಾಗೃಹದಲ್ಲಿ ಇರಿಸಲಾಗಿದೆ.