ಸಂಸದೆ ಮಹುವಾ ಮೊಯಿತ್ರಾ ಅವರ ಲಾಗಿನ್ ಹಾಗೂ ಪ್ರಯಾಣದ ವಿವರ ಕೇಳಿದ ಸಂಸದೀಯ ಸಮಿತಿ
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ವಿರುದ್ಧ ವಿಚಾರಣೆ ನಡೆಸುತ್ತಿರುವ ಸಂಸದೀಯ ನೈತಿಕ ಸಮಿತಿಯು ಗುರುವಾರ ತನ್ನ ಮೊದಲ ವಿಚಾರಣೆಯನ್ನು ನಡೆಸಿದ್ದು, ಮಹುವಾ ಮೊಯಿತ್ರಾ ಅವರ ಲಾಗಿನ್ ಮತ್ತು ಪ್ರಯಾಣದ ವಿವರಗಳನ್ನು ಕೇಳಿದೆ.
ಲೋಕಸಭೆಯಲ್ಲಿ ನೇರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಉದ್ಯಮಿ ದರ್ಶನ್ ಹಿರಾನಂದನಿಗೆ ಸಂಸದೀಯ ಲಾಗಿನ್ ಅನ್ನು ನೀಡಿದ್ದಾರೆ ಎಂಬ ಆರೋಪವನ್ನು ಪರಿಶೀಲಿಸಲು ಮಹುವಾ ಮೊಯಿತ್ರಾ ಅವರ ಲಾಗಿನ್ ಮತ್ತು ಸ್ಥಳಗಳ ವಿವರಗಳಿಗಾಗಿ ಸಮಿತಿಯು ಕೇಂದ್ರ ಐಟಿ ಮತ್ತು ಗೃಹ ಸಚಿವಾಲಯಗಳಿಗೆ ಪತ್ರ ಬರೆದಿದೆ.
ಸರ್ಕಾರ ಮತ್ತು ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿ ಉದ್ಯಮಿ ದರ್ಶನ್ ಪರವಾಗಿ ಮೊಯಿತ್ರಾ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹಣ ಪಡೆದಿದ್ದಾರೆ ಎಂದು ಮೊಯಿತ್ರಾ ವಿರುದ್ಧ ಆರೋಪಿಸಲಾಗಿದೆ.
ದುಬೈನಲ್ಲಿ ನೆಲೆಸಿರುವ ದರ್ಶನ್ ಹಿರಾನಂದನಿ ಅವರ ಅಫಿಡವಿಟ್ ಅನ್ನು ಅನುಮೋದಿಸಲಾಗಿದೆಯೇ ಎಂದು ಪರಿಶೀಲಿಸಲು ಸಮಿತಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ಅಫಿಡವಿಟ್‌ನಲ್ಲಿ, ಮಹುವಾ ಮೊಯಿತ್ರಾ ಅವರು ತಮ್ಮ ಲೋಕಸಭೆಯ ಇ-ಮೇಲ್ ಐಡಿಯನ್ನು ಹಂಚಿಕೊಂಡಿದ್ದಾರೆ, ಆದ್ದರಿಂದ ತಾನು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಬಹುದು ಎಂದು ಹಿರಾನಂದಾನಿ ಆರೋಪಿಸಿದ್ದಾರೆ.
ಮಹುವಾ ಮೊಯಿತ್ರಾ ಅವರ ವಿಚಾರಣೆಯ ನಂತರ ನವೆಂಬರ್ ಆರಂಭದಲ್ಲಿ ತನ್ನ ವರದಿಯನ್ನು ಸಮಿತಿಯು ಸಲ್ಲಿಸಲಿದೆ.