ಗಂಟೆಗೆ 10 ಭಾರತೀಯರಿಂದ ಅಮೆರಿಕ ಅಕ್ರಮ ಪ್ರವೇಶ ಯತ್ನ: 90 ಸಾವಿರ ಮಂದಿ ಬಂಧನ!
ಅಹ್ಮದಾಬಾದ್: ಅಮೆರಿಕ ಗಡಿದಾಟುವ ಪ್ರಯತ್ನದಲ್ಲಿ ಅಕ್ರಮ ಭಾರತೀಯ ವಲಸೆಗಾರರ ಯಾತನಾಮಯ ಪ್ರಯಾಣ ಹಾಗೂ ಸರಣಿ ಸಾವಿನ ಘಟನೆಗಳ ಹೊರತಾಗಿಯೂ, ಅಮೆರಿಕದಲ್ಲಿ ವಾಸಿಸುವ ಆಸೆ ಭಾರತೀಯರಲ್ಲಿ ಅದರಲ್ಲೂ ಮುಖ್ಯವಾಗಿ ಅಮೆರಿಕದಲ್ಲಿ ಪ್ರಬಲವಾಗಿ ಇದೆ.
ಅಮೆರಿಕದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ 2023ರ ಅಕ್ಟೋಬರ್ 1ರಿಂದ 2024ರ ಸೆಪ್ಟೆಂಬರ್ 30ರ ಅವಧಿಯಲ್ಲಿ 29 ಲಕ್ಷ ಅಕ್ರಮ ವಲಸೆಗಾರರು ಕೆನಡಾ ಹಾಗೂ ಮೆಕ್ಸಿಕೊ ಗಡಿ ಮೂಲಕ ಅಮೆರಿಕವನ್ನು ಪ್ರವೇಶಿಸುವ ಪ್ರಯತ್ನ ಮಾಡಿದ ಹಂತದಲ್ಲಿ ಬಂಧನಕ್ಕೀಡಾಗಿದ್ದಾರೆ. ಈ ಪೈಕಿ 90415 ಮಂದಿ ಭಾರತೀಯರು ಸೇರಿದ್ದಾರೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಸಂಸ್ಥೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಬಂಧಿತರಲ್ಲಿ ಶೇಕಡ 50ರಷ್ಟು ಮಂದಿ ಗುಜರಾತಿಗಳು ಎಂದು ಅಕ್ರಮ ವಲಸೆಯ ಮೇಲೆ ನಿಗಾ ಇಟ್ಟಿರುವ ಭಾರತೀಯ ಏಜೆನ್ಸಿಗಳು ಸ್ಪಷ್ಟಪಡಿಸಿವೆ. ಅಂದರೆ ಪ್ರತಿ ಗಂಟೆಗೆ 10 ಮಂದಿ ಭಾರತೀಯ ಅಕ್ರಮ ವಲಸೆಗಾರರು ಬಂಧನಕ್ಕೀಡಾಗುತ್ತಿದ್ದಾರೆ. ಅಂತೆಯೇ 43764 ಮಂದಿಯನ್ನು ಕೆನಡಾ ಗಡಿಯಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ ಗರಿಷ್ಠ ಸಂಖ್ಯೆಯ ಭಾರತೀಯ ವಲಸೆಗಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಒಟ್ಟು ಬಂಧಿತರಾದ ಅಕ್ರಮ ವಲಸಿಗರ ಸಂಖ್ಯೆ ಹಿಂದಿನ ವರ್ಷ ಇದ್ದ 32 ಲಕ್ಷಕ್ಕೆ ಹೋಲಿಸಿದರೆ ತುಸು ಕಡಿಮೆಯಾಗಿದೆ. ಅಂತೆಯೇ ಮೆಕ್ಸಿಕೋ ಗಡಿಯ ಮಾರ್ಗದಲ್ಲಿ ಬಂಧಿತರಾದ ಭಾರತೀಯರ ಸಂಖ್ಯೆಯೂ ಇಳಿಮುಖವಾಗಿದೆ. 2023ನೇ ಹಣಕಾಸು ವರ್ಷದಲ್ಲಿ ಒಟ್ಟು 96917 ಭಾರತೀಯ ಅಕ್ರಮ ವಲಸೆಗಾರರನ್ನು ಬಂಧಿಸಲಾಗಿತ್ತು. 2024ರಲ್ಲಿ ಕಡಿಮೆ ಸಂಖ್ಯೆಯ (25,616) ಭಾರತೀಯರನ್ನು ಅಮೆರಿಕ- ಮೆಕ್ಸಿಕೊ ಗಡಿಯಲ್ಲಿ ಬಂಧಿಸಲಾಗಿದೆ. 2023ರಲ್ಲಿ ಈ ಸಂಖ್ಯೆ 41,770 ಆಗಿತ್ತು.
"ಜನರು ಮುಖ್ಯವಾಗಿ ಮೆಕ್ಸಿಕೋ ಮಾರ್ಗದ ಮೂಲಕ ಬರುವ ಕತ್ತೆ ಮಾರ್ಗದ ಬಳಕೆಯನ್ನು ಎರಡು ಕಾರಣಗಳಿಂದ ಕಡಿಮೆ ಮಾಡುತ್ತಿದ್ದಾರೆ. ಒಂದನೆಯದಾಗಿ ಮೆಕ್ಸಿಕೋಗೆ ಕರೆತರುವ ಮುನ್ನ ಕೆಲಕಾಲ ಅವರನ್ನು ದುಬೈ ಅಥವಾ ಟರ್ಕಿಯಲ್ಲಿ ಇರಿಸಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಅಮೆರಿಕದ ಏಜೆನ್ಸಿಗಳು ಈ ದೇಶಗಳಲ್ಲಿ ವಾಸಿಸುವ ಅಕ್ರಮ ವಲಸಿಗರ ಮೇಲೆ ಹದ್ದಿನ ಕಣ್ಣು ಇರಿಸುತ್ತಾರೆ ಹಾಗೂ ಮಾನವ ಕಳ್ಳಸಾಗಾಣಿಕೆ ಸರಪಣಿಯನ್ನು ತುಂಡರಿಸಲು ಪ್ರಯತ್ನ ಮಾಡುತ್ತಿದ್ದಾರೆ" ಎಂದು ಮೂಲಗಳು ಹೇಳಿವೆ.
ಗುಜರಾತಿಗಳು ಕೂಡಾ ಮೆಕ್ಸಿಕೋ ಬದಲಾಗಿ ಕೆನಡಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅಲ್ಲಿ ಬಾಡಿಗೆ ಕಾರನ್ನು ಸುಲಭವಾಗಿ ಪಡೆದು ಅಮೆರಿಕದ ಗಡಿ ದಾಟಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.