ಈಡಿಯಿಂದ ಜಮ್ಮುಕಾಶ್ಮೀರದ ಬಿಜೆಪಿಯ ಮಾಜಿ ಸಚಿವ ಬಂಧನ
ಶ್ರೀನಗರ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಚಿವ ಹಾಗೂ ಜಮ್ಮು ಮೂಲದ ಡೋಗ್ರ ಸ್ವಾಭಿಮಾನ್ ಸಂಘಟನ್ ಪಾರ್ಟಿ (ಡಿಎಸ್‌ಎಸ್‌ಪಿ)ಯ ವರಿಷ್ಠ ಚೌಧರಿ ಲಾಲ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬೆಳಗ್ಗೆ ಬಂಧಿಸಿದೆ.
ಸ್ಥಳೀಯ ನ್ಯಾಯಾಲಯ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಲಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಜಮ್ಮುವಿನ ಹೊರವಲಯದಲ್ಲಿರುವ ಸೈನಿಕ್ ಕಾಲನಿಯ ಚಾವಡಿ ಪ್ರದೇಶದಲ್ಲಿರುವ ನಿವಾಸದಿಂದ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿದೆ.
ಬಂಧನದ ಬಳಿಕ ಅವರನ್ನು ಜಮ್ಮುವಿನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆದೊಯ್ಯಲಾಯಿತು. ಬುಧವಾರ ಬೆಳಗ್ಗೆ ಅವರನ್ನು ವೈದ್ಯಕೀಯ ತಪಾಸಣೆಗೆ ಜಮ್ಮುವಿನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಹಾಗೂ ಅವರಿಗೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಲಾಲ್ ಸಿಂಗ್ ಅವರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಮಂಗಳವಾರ ತಿರಸ್ಕರಿಸಿದ ಜಮ್ಮುವಿನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಬಾಲಾ ಜ್ಯೋತಿ, ಆರೋಪದ ಲಕ್ಷಣ, ಆರೋಪದ ಗಂಭೀರತೆ, ತನಿಖೆಯ ಹಂತವನ್ನು ಗಮನದಲ್ಲಿರಿಸಿಕೊಂಡು ಪರಿಣಾಮಕಾರಿ ತನಿಖೆ ಹಾಗೂ ವಿಶ್ಲೇಷಣೆ ನಡೆಸಲು ತನಿಖಾ ಸಂಸ್ಥೆಗೆ ಸಾಕಷ್ಟು ಸಮಯಾವಕಾಶ ನೀಡಬೇಕು ಎಂದು ಅಭಿಪ್ರಾಯಿಸಿತು.
ಆದರೆ, ನ್ಯಾಯಾಲಯ ಲಾಲ್ ಸಿಂಗ್ ಅವರ ಪತ್ನಿ ಕಾಂತಾ ಅಂದೋತ್ರಾ ಹಾಗೂ ಅವರ ಪುತ್ರಿಯ ಮಧ್ಯಂತರ ನಿರೀಕ್ಷಣಾ ಜಾಮೀನಿನ ವಿಚಾರಣೆಯನ್ನು ನವೆಂಬರ್ 30ರ ವರೆಗೆ ಮುಂದೂಡಿತು.
ಲಾಲ್ ಸಿಂಗ್ ಅವರ ಪತ್ನಿ ಹಾಗೂ ಮಾಜಿ ಶಾಸಕಿ ಕಾಂತಾ ಅಂದೊತ್ರಾ ನಡೆಸುತ್ತಿರುವ ಶಿಕ್ಷಣ ಟ್ರಸ್ಟ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿರುವ ಪ್ರಕರಣದ ಭಾಗವಾಗಿ ಲಾಲ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದೆ.
ಲಾಲ್ ಸಿಂಗ್ ಅವರನ್ನು ಬಂಧಿಸುವ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜುಮ್ಮುವಿನಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಹಾಗೂ ಸೋಮವಾರ ಅವರ ವಿಚಾರಣೆ ನಡೆಸಿದರು.
ಲಾಲ್ ಸಿಂಗ್ ಈ ಹಿಂದಿನ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಬಿಜೆಪಿ ಸಚಿವರಾಗಿದ್ದರು.