ಫಗ್ರ್ಯೂಸನ್ ದಾಖಲೆ ಬೌಲಿಂಗ್: ಜಯದೊಂದಿಗೆ ನಿರ್ಗಮಿಸಿದ ನ್ಯೂಝಿಲ್ಯಾಂಡ್
ಹೊಸದಿಲ್ಲಿ: ಲೂಕಿ ಫಗ್ರ್ಯೂಸನ್ ಟಿ20 ವಿಶ್ವಕಪ್‍ನಲ್ಲಿ ಅತ್ಯಂತ ಮಿತವ್ಯಯದ ಬೌಲರ್ ಎಂಬ ವಿಶ್ವದಾಖಲೆ ನಿರ್ಮಿಸುವ ಮೂಲಕ, ನ್ಯೂಝಿಲ್ಯಾಂಡ್ ತಂಡ, ಕ್ರಿಕೆಟ್ ಶಿಶು ಪಪುವಾ ನ್ಯೂಗುನ್ಯಾ ತಂಡವನ್ನು 7 ವಿಕೆಟ್ ಅಂತರದಿಂದ ಸೋಲಿಸಿತು. ಟ್ರಿನಿಡಾಡ್‍ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಜಯ ಸಾಧಿಸಿದರೂ, ನ್ಯೂಝಿಲ್ಯಾಂಡ್ ತಂಡ ಟೂರ್ನಿಯಿಂದ ನಿರ್ಗಮಿಸಿತು. ಸಿ ಗುಂಪಿನಿಂದ ಅಫ್ಘಾನಿಸ್ತಾನ ಹಾಗೂ ವೆಸ್ಟ್‍ಇಂಡೀಸ್ ಸೂಪರ್8 ಹಂತ ತಲುಪಿವೆ.
ಫಗ್ರ್ಯೂಸನ್ ಎಲ್ಲ ನಾಲ್ಕು ಮೇಡನ್ ಓವರ್ ಸಾಧಿಸಿ ಮೂರು ವಿಕೆಟ್ ಕೀಳುವ ಮೂಲಕ ಪಿಎನ್‍ಜಿ ತಂಡ 19.4 ಓವರ್‍ಗಳಲ್ಲಿ ಕೇವಲ 78 ರನ್‍ಗಳಿಗೆ ಆಲೌಟ್ ಆಗಲು ಕಾರಣರಾದರು. ನ್ಯೂಝಿಲ್ಯಾಂಡ್ ತಂಡ ಆ ಬಳಿಕ 46 ಎಸೆತಗಳು ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು.
ಕೆನಡಾದ ಸಾದ್ ಬಿನ್ ಜಾಫರ್ ದಾಖಲೆಯನ್ನು ಸರಿಗಟ್ಟಿದ ಫಗ್ರ್ಯೂಸನ್, ಟಿ20 ಇತಿಹಾಸದಲ್ಲಿ 24 ಎಸೆತಗಳಲ್ಲಿ ಒಂದೂ ರನ್ ನೀಡದೇ ಮೂರು ಅಥವಾ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದರು. ಜಾಫರ್ ಈ ಮುನ್ನ 4 ಓವರ್‍ಗಳಲ್ಲಿ ಯಾವುದೇ ರನ್ ನೀಡದೇ 2 ವಿಕೆಟ್ ಪಡೆದಿದ್ದರು.
ಗುಂಪು ಹಂತದಲ್ಲಿ ಒಮನ್ ಮತ್ತು ಪಿಎನ್‍ಜಿ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರೂ, ಅಘ್ಫಾನಿಸ್ತಾನ ಹಾಗೂ ವೆಸ್ಟ್‍ಇಂಡೀಸ್ ವಿರುದ್ಧದ ಸೋಲಿನಿಂದಾಗಿ ಟೂರ್ನಿಯಿಂದ ನಿರ್ಗಮಿಸಬೇಕಾಯಿತು. ಪಿಎನ್‍ಜಿ ತಂಡ ಸಿ ಗುಂಪಿನಲ್ಲಿ ಎಲ್ಲ ಪಂದ್ಯಗಳನ್ನೂ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.
ನ್ಯೂಝಿಲ್ಯಾಂಡ್ ಬೌಲರ್‍ಗಳು ನಿಯತವಾಗಿ ಪಿಎನ್‍ಜಿ ಬ್ಯಾಟ್ಸ್‍ಮನ್‍ಗಳನ್ನು ಕಾಡಿದರು. ಟ್ರೆಂಟ್ ಬೋಲ್ಟ್ (14ಕ್ಕೆ 2), ಟಿಮ್ ಸೌಥಿ (11ಕ್ಕೆ 2), ಇಶ್ ಸೌಥಿ (29ಕ್ಕೆ 2) ಮತ್ತು ಸ್ಯಾಂಟ್ನರ್ (17ಕ್ಕೆ 1), ಫಗ್ರ್ಯೂಸನ್ ಅವರಿಗೆ ಸಾಥ್ ನೀಡಿದರು.
ಅಲ್ಪಮೊತ್ತವನ್ನು ಬೆನ್ನಟ್ಟಿದ ನ್ಯೂಝಿಲ್ಯಾಂಡ್ 2ನೇ ಎಸೆತದಲ್ಲೇ ಫಿನ್ ಅಲೆನ್ ಅವರ ವಿಕೆಟ್ ಕಳೆದುಕೊಂಡಿತು. ರಚಿನ್ ರವೀಂದ್ರ (6) ಕೂಡಾ 20 ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಡೆವೋನ್ ಕಾನ್ವೆ (32 ಎಸೆತಗಳಲ್ಲಿ 35) ಉತ್ತಮ ಕೌಶಲ ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇನ್ ವಿಲಿಯಮ್ಸನ್ (ನಾಟೌಟ್ 18) ಮತ್ತು ಡೆರಿಲ್ ಮಿಚೆಲ್ (12 ಎಸೆತಗಳಲ್ಲಿ 19 ನಾಟೌಟ್) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.