ʼಸಿಂಗಂʼ ರೀತಿಯ ಸಿನೆಮಾಗಳು ತಪ್ಪಾದ ಸಂದೇಶವನ್ನು ನೀಡುತ್ತದೆ: ಬಾಂಬೆ ಹೈಕೋರ್ಟ್‌ ಜಡ್ಜ್‌ ಅಸಮಾಧಾನ

Update: 2023-09-23 09:03 GMT

ಮುಂಬೈ: ʼಸಿಂಗಂʼ ರೀತಿಯ ಚಿತ್ರಗಳಲ್ಲಿ ತೋರಿಸಿರುವಂತೆ ಕಾನೂನು ಪ್ರಕ್ರಿಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತ್ವರಿತ ನ್ಯಾಯ ಒದಗಿಸುವ ಸಿನಿಮೀಯ ʼಪೋಲೀಸ್’ಪಾತ್ರಗಳು ಅತ್ಯಂತ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಪಟೇಲ್ ಹೇಳಿದ್ದಾರೆ.

ಇಂಡಿಯನ್ ಪೊಲೀಸ್ ಫೌಂಡೇಶನ್ ತನ್ನ ವಾರ್ಷಿಕ ದಿನ ಮತ್ತು ಪೊಲೀಸ್ ಸುಧಾರಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನಿನ ಪ್ರಕ್ರಿಯೆಯ ಬಗ್ಗೆ ಜನರು ವ್ಯಕ್ತಪಡಿಸುತ್ತಿರುವ ಅಸಹನೆಯ ಬಗ್ಗೆ ಉಲ್ಲೇಖಿಸಿದ್ದಾರೆ.

ಪೊಲೀಸ್ ಸುಧಾರಣೆಗಳ ಕುರಿತು ಮಾತನಾಡಿದ ನ್ಯಾಯಾಧೀಶರು, ನಮ್ಮನ್ನು ನಾವು ಸುಧಾರಿಸಿಕೊಳ್ಳದ ಹೊರತು ಕಾನೂನು ಜಾರಿ ಯಂತ್ರವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪೋಲೀಸರು ಎಂದರೆ ʼಬೆದರಿಸುವವರು, ಭ್ರಷ್ಟರು ಮತ್ತು ಜವಾಬ್ದಾರಿ ಇಲ್ಲದವರುʼ ಎಂಬ ಚಿತ್ರಣವು ಜನರ ನಡುವೆ ಇದೆ. ನ್ಯಾಯಾಧೀಶರು, ರಾಜಕಾರಣಿಗಳು ಮತ್ತು ಪತ್ರಕರ್ತರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿರುವ ಯಾರಿಗಾದರೂ ಅದನ್ನೇ ಹೇಳಬಹುದು ಎಂದು ಅವರು ಹೇಳಿದರು.

ನ್ಯಾಯಾಲಯಗಳು ತಮ್ಮ ಕೆಲಸವನ್ನು ಮಾಡುತ್ತಿಲ್ಲ ಎಂದು ಭಾವಿಸುವ ಸಾರ್ವಜನಿಕರು, ಪೊಲೀಸರು ಮಧ್ಯಪ್ರವೇಶಿಸುವುದನ್ನು ಸಂಭ್ರಮಿಸಲ್ಪಡಲಾಗುತ್ತಿದೆ ಎಂದು ನ್ಯಾಯಾಧೀಶರು ಗಮನ ಸೆಳೆದರು.

"ಇದಕ್ಕಾಗಿಯೇ ಅತ್ಯಾಚಾರ ಆರೋಪಿಯು ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರೆ, ಜನರು ಅದು ಪರವಾಗಿಲ್ಲ ಎಂದು ಭಾವಿಸುತ್ತಾರೆ, ಹಾಗೂ ಅದನ್ನು ಸಂಭ್ರಮಾಚರಿಸಲಾಗುತ್ತದೆ. ನ್ಯಾಯವನ್ನು ನೀಡಲಾಗಿದೆ ಅವರು ಭಾವಿಸುತ್ತಾರೆ, ಆದರೆ ಅದು ಹಾಗೆ ಇದೆಯೇ?" ಅವರು ಪ್ರಶ್ನಿಸಿದ್ದಾರೆ.

ನಮ್ಮ ಜನಪ್ರಿಯ ಸಂಸ್ಕೃತಿಯಲ್ಲಿ ಈ ದೃಷ್ಟಿಕೋನವು ಆಳವಾಗಿದೆ ಮತ್ತು ವ್ಯಾಪಕವಾಗಿದೆ. ಮುಖ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ಈ ದೃಷ್ಟಿಕೋನವು ಬಲವಾಗಿ ಪ್ರತಿಫಲಿಸುತ್ತದೆ ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದ್ದಾರೆ.

"ಚಲನಚಿತ್ರಗಳಲ್ಲಿ ಅಂಜುಬುರುಕ, ದಪ್ಪ ಕನ್ನಡಕ ಮತ್ತು ಸಾಮಾನ್ಯವಾಗಿ ತುಂಬಾ ಕೆಟ್ಟ ರೀತಿಯಲ್ಲಿ ವಸ್ತ್ರ ಧರಿಸಿರುವ ನ್ಯಾಯಾಧೀಶರ ವಿರುದ್ಧ ಪೊಲೀಸರು ಹರಿಹಾಯುವುದನ್ನು ತೋರಿಸಲಾಗುತ್ತದೆ. ನ್ಯಾಯಾಧೀಶರು ತಪ್ಪಿತಸ್ಥರನ್ನು ಹೋಗಲು ಬಿಡುತ್ತಾರೆ ಎಂದು ಅವರು ನ್ಯಾಯಾಲಯಗಳನ್ನು ದೂಷಿಸಿ, ಪೊಲೀಸ್ ನಾಯಕ ಏಕಾಂಗಿಯಾಗಿ ನ್ಯಾಯವನ್ನು ನೀಡುವವನಂತೆ ತೋರಿಸಲಾಗುತ್ತದೆ" ಎಂದು ಅವರು ಹೇಳಿದರು.

"ಸಿಂಗಂ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಪ್ರಕಾಶ್ ರಾಜ್ ನಟಿಸಿದ ರಾಜಕಾರಣಿ ಪಾತ್ರ ವಿರುದ್ಧ ಇಡೀ ಪೊಲೀಸ್ ಪಡೆಯೇ ಇಳಿದು ನ್ಯಾಯ ನೀಡಲಾಗಿದೆ ಎಂಬಂತೆ ತೋರಿಸುತ್ತದೆ. ಆದರೆ ಇಂತಹ ಒಂದು ವ್ಯವಸ್ಥೆ ಇದೆಯೇ? ಆ ಸಂದೇಶ ಎಷ್ಟು ಅಪಾಯಕಾರಿ ಎಂದು ಯೋಚಿಸಬೇಕು” ಎಂದು ಹೇಳಿದ್ದಾರೆ.

ನ್ಯಾಯದ ಪ್ರಕ್ರಿಯೆ ಬಗ್ಗೆ ಏಕೆ ಈ ಅಸಹನೆ? ನಾವು ಅಮಾಯಕತನ ಅಥವಾ ಅಪರಾಧವನ್ನು ನಿರ್ಧರಿಸಲು ಪ್ರಕ್ರಿಯೆಯ ಮೂಲಕವೇ ಹೋಗಬೇಕು. ಈ ಪ್ರಕ್ರಿಯೆಗಳು ನಿಧಾನವಾಗಿರುತ್ತವೆ. ಅವುಗಳು ಹಾಗೇ ಇರಬೇಕು. ಏಕೆಂದರೆ, ಅವಸರದ ಪ್ರಕ್ರಿಯೆಯು ವ್ಯಕ್ತಿಯ ಸ್ವಾತಂತ್ರ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.

"ಶಾರ್ಟ್‌ಕಟ್‌ಗಳಿಗೆ ಬೇಕಾಗಿ ಈ ಪ್ರಕ್ರಿಯೆಯನ್ನು ಕೈಬಿಟ್ಟರೆ, ನಾವು ಕಾನೂನಿನ ನೀತಿ-ನಿಯಮವನ್ನು ಹಾಳುಮಾಡುತ್ತೇವೆ" ಎಂದು ನ್ಯಾಯಮೂರ್ತಿ ಪಟೇಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News