ಬಿಜೆಪಿ 370ನೇ ವಿಧಿಯನ್ನು ಮರು ಸ್ಥಾಪಿಸುತ್ತದೆ ಎಂದು ನಂಬುವುದು ಮೂರ್ಖತನ : ಉಮರ್ ಅಬ್ದುಲ್ಲಾ

Update: 2024-10-09 16:03 GMT

 ಉಮರ್ ಅಬ್ದುಲ್ಲಾ | PTI 

ಶ್ರೀನಗರ : ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಬಿಜೆಪಿ ಮರು ಸ್ಥಾಪನೆ ಮಾಡುತ್ತದೆ ಎಂದು ಭಾವಿಸುವುದು ಮೂರ್ಖತನ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ.

ಆದರೆ, ತನ್ನ ಪಕ್ಷ ಈ ವಿಷಯವನ್ನು ಜೀವಂತವಾಗಿ ಇರಿಸಲಿದೆ ಹಾಗೂ ಈ ಬಗ್ಗೆ ನಿರಂತರ ಪ್ರಶ್ನೆ ಎತ್ತಲಿದೆ ಎಂದು ಅವರು ಹೇಳಿದ್ದಾರೆ.

‘‘ನಮ್ಮ ರಾಜಕೀಯ ನಿಲುವು ಬದಲಾಗುವುದಿಲ್ಲ. ವಿಧಿ 370ರ ಕುರಿತು ನಾವು ಮೌನ ವಹಿಸಲಿದ್ದೇವೆ ಅಥವಾ ವಿಧಿ 370 ಈಗ ನಮಗೆ ವಿಷಯವಲ್ಲ ಎಂದು ನಾವು ಎಂದೂ ಹೇಳಿಲ್ಲ’’ ಎಂದು ಅವರು ತಿಳಿಸಿದರು.

ನೂತನ ಸರಕಾರ ರಚನೆಯಾದ ಬಳಿಕ ವಿಧಿ 370 ರದ್ದತಿಯ ಕುರಿತು ಪಕ್ಷದ ನಿಲುವು ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

370ನೇ ವಿಧಿಯನ್ನು ಕಿತ್ತುಕೊಂಡ ಜನರಿಂದ ಅದರ ಮರು ಸ್ಥಾಪನೆಗೆ ಆಶಿಸುವುದು ಮೂರ್ಖತನ ಎಂದು ನಾನು ಚುನಾವಣೆಯ ಮುನ್ನ ಹಲವು ಬಾರಿ ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.

‘‘ಆದರೆ, ನಾವು ಈ ವಿಷಯವನ್ನು ಜೀವಂತವಾಗಿ ಇರಿಸಲಿದ್ದೇವೆ. ಈ ವಿಷಯದ ಕುರಿತು ನಿರಂತರವಾಗಿ ಮಾತನಾಡಲಿದ್ದೇವೆ. ದೇಶದಲ್ಲಿ ಮುಂದೊಂದು ದಿನ ಸರಕಾರ ಬದಲಾವಣೆಯಾಗಬಹುದು ಎಂದು ನಾವು ಭಾವಿಸುತ್ತೇವೆ’’ ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News