2028ರವರೆಗೆ ಕಲ್ಯಾಣ ಯೋಜನೆಗಳಡಿ 17,000 ಕೋಟಿ ರೂ. ವೆಚ್ಚದಲ್ಲಿ ಸಾರವರ್ಧಿತ ಅಕ್ಕಿ ಪೂರೈಕೆಗೆ ಕೇಂದ್ರದ ನಿರ್ಧಾರ

Update: 2024-10-09 17:21 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ರಕ್ತಹೀನತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ತಗ್ಗಿಸಲು ಆಹಾರ ಕಾಯ್ದೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಡಿ 17,000 ಕೋಟಿ ರೂ.ವೆಚ್ಚದಲ್ಲಿ ಉಚಿತ ಸಾರವರ್ಧಿತ ಅಕ್ಕಿ ಪೂರೈಕೆಯನ್ನು ಡಿಸೆಂಬರ್ 2028ರವರೆಗೆ ಮುಂದುವರಿಸಲು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಕ್ಕಿ ಸಾರವರ್ಧನೆ ಪ್ರಕ್ರಿಯೆಯು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಶಿಫಾರಸು ಮಾಡಿರುವ ಮಾನದಂಡಗಳಿಗೆ ಅನುಗುಣವಾಗಿ ಸೂಕ್ಷ್ಮ ಪೋಷಕಾಂಶ(ಕಬ್ಬಿಣ,ಫಾಲಿಕ್ ಆ್ಯಸಿಡ್,ವಿಟಮಿನ್ ಬಿ12) ಸಮೃದ್ಧ ಸಾರವರ್ಧಿತ ಅಕ್ಕಿಯನ್ನು ಸಾಮಾನ್ಯ ಅಕ್ಕಿಗೆ ಸೇರಿಸುವುದನ್ನು ಒಳಗೊಂಡಿರುತ್ತದೆ.

ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಸಾರವರ್ಧಿತ ಅಕ್ಕಿ ಪೂರೈಕೆಗಾಗಿ 17,082 ಕೋಟಿ ರೂ.ಗಳು ವೆಚ್ಚವಾಗಲಿದ್ದು,ಇದನ್ನು ಸಂಪೂರ್ಣವಾಗಿ ಕೇಂದ್ರವೇ ಭರಿಸಲಿದೆ ಎಂದು ತಿಳಿಸಿದರು.

75ನೇ ಸ್ವಾತಂತ್ರ್ಯ ದಿನದಂದು ದೇಶದಲ್ಲಿ ಪೌಷ್ಟಿಕತೆ ಅಗತ್ಯ ಕುರಿತು ಪ್ರಧಾನಿಯವರ ಭಾಷಣಕ್ಕೆ ಅನುಗುಣವಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣೆ ವ್ಯವಸ್ಥೆ ಮತ್ತು ಇತರ ಕಲ್ಯಾಣ ಯೋಜನೆಗಳ ಮೂಲಕ ಸಾರವರ್ಧಿತ ಅಕ್ಕಿ ಪೂರೈಕೆ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಮಾರ್ಚ್ 2024ರೊಳಗೆ ದೇಶಾದ್ಯಂತ ಅಕ್ಕಿ ಸಾರವರ್ಧನೆ ಉಪಕ್ರಮವನ್ನು ಹಂತ ಹಂತವಾಗಿ ಜಾರಿಗೊಳಿಸಲು ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಎಪ್ರಿಲ್ 2022ರಲ್ಲಿ ನಿರ್ಧರಿಸಿತ್ತು ಮತ್ತು ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ ಎಂದು ತಿಳಿಸಿರುವ ಹೇಳಿಕೆಯು, 2019-2021ರ ನಡುವೆ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಂತೆ ರಕ್ತಹೀನತೆಯು ಭಾರತದಲ್ಲಿ ವ್ಯಾಪಕ ಸಮಸ್ಯೆಯಾಗಿ ಉಳಿದುಕೊಂಡಿದ್ದು, ವಿವಿಧ ವಯೋ ಮತ್ತು ಆದಾಯ ಗುಂಪುಗಳಲ್ಲಿ ಮಕ್ಕಳು,ಮಹಿಳೆಯರು ಮತ್ತು ಪುರುಷರನ್ನು ಕಾಡುತ್ತಿದೆ. ಕಬ್ಬಿಣ,ಇತರ ವಿಟಮಿನ್ ಮತ್ತು ಖನಿಜಗಳ ಕೊರತೆಯು ಜನತೆಯ ಒಟ್ಟಾರೆ ಆರೋಗ್ಯ ಮತ್ತು ಜನರ ಉತ್ಪಾದಕತೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News