ಗುಜರಾತ್: ಗಾಳಿಪಟ ‘ಮಾಂಜಾ’ದಿಂದ ಕತ್ತು ಸೀಳಿ ನಾಲ್ವರು ಮೃತ್ಯು
ಅಹ್ಮದಾಬಾದ್: ಗುಜರಾತ್‌ನಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಗಾಳಿಪಟ ಹಾರಾಟದ ಸಂದರ್ಭ ಮಾಂಜಾ (ಗಾಳಿಪಟದ ದಾರ)ದಿಂದ ಕೊರಳು ಸೀಳಲ್ಪಟ್ಟು ನಾಲ್ಕು ವರ್ಷದ ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ರಾಜಕೋಟ್, ಪಂಚಮಹಲ್, ಮೆಹ್ಸಾನ ಹಾಗೂ ಸುರೇಂದ್ರ ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಗಾಳಿಪಟ ಹಾರಾಟದ ಸಂದರ್ಭ ಹಲವಾರು ಮಂದಿ ಗಾಯಗೊಂಡ ಘಟನೆಗಳು ವರದಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಯಣ ಸಂಭ್ರಮಾಚರಣೆಯ ಪ್ರಯುಕ್ತ ಗುಜರಾತ್‌ನಲ್ಲಿ ಗಾಳಿಪಟ ಹಾರಾಟ ನಡೆಸುವ ಸಂಪ್ರದಾಯ ಜನಪ್ರಿಯವಾಗಿದೆ.
ಪಂಚಮಹಲ್ ಜಿಲ್ಲೆಯ ಹಲೊಲ್ ಪಟ್ಟಣದಲ್ಲಿ ನಾಲ್ಕು ವರ್ಷದ ಕುನಾಲ್ ಪರಮಾರ್ ಎಂಬ ಬಾಲಕನ ಕೊರಳನ್ನು ಗಾಳಿಪಟದ ದಾರ ಸೀಳಿಹಾಕಿರುವುದಾಗಿ ಸ್ಥಳೀಯ ಪೊಲೀಸ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುನಾಲ್ ಪರಮಾರ್ ಮಾರುಕಟ್ಟೆಯಲ್ಲಿ ಗಾಳಿಪಟ ಹಾಗೂ ಬಲೂನುಗಳನ್ನು ಖರೀದಿಸಲು ತನ್ನ ತಂದೆಯೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಗಾಳಿಪಟದ ದಾರದ ತುಂಡು ಆತನ ಕತ್ತನ್ನು ಸುತ್ತುವರಿದ್ದು, ಹರಿತವಾದ ಗಾಯವನ್ನುಂಟು ಮಾಡಿತ್ತು. ತೀವ್ರ ರಕ್ತಸ್ರಾವಗೊಂಡ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಳಿಪಟ ಹಾರಾಟಕ್ಕೆ ಸಂಬಂಧಿಸಿ ಅವಘಡಗಳ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯದ ಆ್ಯಂಬುಲೆನ್ಸ್ ಸೇವೆ 308ಕ್ಕೆ 3707ಕ್ಕೂ ಅಧಿಕ ತುರ್ತು ಕರೆಗಳು ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ನೈಲಾನ್‌ನ ಅಥವಾ ಗಾಜಿನ ಚೂರುಗಳಿಂದ ಲೇಪಿತತವಾದ ಗಾಳಿಪಟ ದಾರವು ಅತ್ಯಂತ ಅಪಾಯಕಾರಿಯಾಗಿದೆ. ಅದನ್ನು ನಿಷೇಧಿಸಲಾಗಿದ್ದರೂ, ಎದುರಾಳಿಗಳ ಗಾಳಿಪಟವನ್ನು ಕತ್ತರಿಸುವ ಉದ್ದೇಶದಿಂದ ಅನೇಕ ಗಾಳಿಪಟ ಹಾರಿಸುವವರು ಈಗಲೂ ಅದನ್ನು ಬಳಸಿಕೊಳ್ಳುತ್ತಿದಾದರೆ.