ಪಂಜಾಬ್: ಬಿಷ್ಣೋಯಿ-ಬ್ರಾರ್ ತಂಡದ ಇಬ್ಬರು ಸದಸ್ಯರ ಬಂಧನ
ಚಂಡಿಗಢ : ಜಲಾಂದರ್‌ನಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದ ಬಳಿಕ ಲಾರೆನ್ಸ್ ಬಿಷ್ಣೋಯಿ-ಗೋಲ್ಡಿ ಬ್ರಾರ್ ತಂಡದ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಬೆನ್ನಟ್ಟಿಕೊಂಡು ಹೋದಾಗ ಅವರು ಗುಂಡಿನ ದಾಳಿ ನಡೆಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಕಾಳಗದಲ್ಲಿ ಓರ್ವ ಆರೋಪಿಗೆ ಗಾಯಗಳಾಗಿವೆ ಎಂದು ಪಂಜಾಬ್‌ನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘‘ಪ್ರಮುಖ ಬೆಳವಣಿಗೆಯೊಂದರಲ್ಲಿ ಜಲಾಂಧರ್ ಕಮಿಷನರೇಟ್ ಪೊಲೀಸರು ಲಾರೆನ್ಸ್ ಬಿಷ್ಣೋಯಿ-ಗೋಲ್ಡಿ ಬ್ರಾರ್ ತಂಡದ ಇಬ್ಬರು ಪ್ರಮುಖ ಸದಸ್ಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆನ್ನಟ್ಟಿದಾಗ ಅವರು ಪೊಲೀಸರ ತಂಡದ ಮೇಲೆ ಗುಂಡು ಹಾರಿಸಿದರು. ಪೊಲೀಸರ ತಂಡ ಆತ್ಮ ರಕ್ಷಣೆಗೆ ಪ್ರತಿ ದಾಳಿ ನಡೆಸಿತು’’ ಎಂದು ಡಿಜಿಪಿ ಗೌರವ್ ಯಾದವ್ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಗುಂಡಿನ ಕಾಳಗದಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿವೆ. ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಇನ್ನೋರ್ವ ಪರಾರಿಯಾಗಲು ಯತ್ನಿಸಿದ. ಆದರೆ, ಆತನನ್ನು ಅನಂತರ ಬಂಧಿಸಲಾಯಿತು. ಅವರಿಂದ ಸಜೀವ ಕಾಟ್ರಿಜ್‌ಗಳೊಂದಿಗೆ ನಾಲ್ಕು ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾದಕ ದ್ರವ್ಯ ಸಾಗಾಟ, ಶಸ್ತ್ರಾಸ್ತ್ರ ವ್ಯಾಪಾರ ಹಾಗೂ ಸುಲಿಗೆ ಸೇರಿದಂತೆ ಈ ತಂಡದ ಕ್ರಿಮಿನಲ್ ಜಾಲಕ್ಕೆ ಈ ಬಂಧನ ಅತಿ ದೊಡ್ಡ ಹೊಡೆತ ನೀಡಿದೆ ಎಂದು ಯಾದವ್ ತಿಳಿಸಿದ್ದಾರೆ.