ದಲ್ಲೇವಾಲ್ ಆರೋಗ್ಯದ ವರದಿ ಸಲ್ಲಿಸಲು ಪಂಜಾಬ್ ಸರಕಾರಕ್ಕೆ ಸುಪ್ರೀಂ ಸೂಚನೆ

Update: 2025-01-15 17:48 GMT

ಜಗಜೀತ್ ಸಿಂಗ್ ಡಲ್ಲೇವಾಲ್ | PC : PTI 

ಹೊಸದಿಲ್ಲಿ : ಖನೌರಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರ ಆರೋಗ್ಯದ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಪಂಜಾಬ್ ಸರಕಾರಕ್ಕೆ ನಿರ್ದೇಶಿಸಿದೆ.

ಈ ವರದಿಯನ್ನು ವೈದ್ಯಕೀಯ ಮಂಡಳಿಯಿಂದ ಪರಿಶೀಲಿಸಿ ಅಭಿಪ್ರಾಯ ನೀಡುವಂತೆ ದಿಲ್ಲಿಯ ಏಮ್ಸ್‌ಗೂ ಅದು ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರನ್ನು ಒಳಗೊಂಡ ಪೀಠ, ಸುಮಾರು 50 ದಿನಗಳ ಕಾಲ ಉಪವಾಸ ಮುಷ್ಕರ ನಡೆಸುತ್ತಿದ್ದ ವ್ಯಕ್ತಿಯ ಆರೋಗ್ಯ ಸ್ಥಿತಿ ಸುಧಾರಿಸಿರುವುದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿತು. ಅಲ್ಲದೆ, ದಲ್ಲೇವಾಲ್ ಅವರ ಆರೋಗ್ಯ ತಪಾಸಣೆಯ ವರದಿಗಳನ್ನು ದಿನದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ಪಂಜಾಬ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತು.

ಡಲ್ಲೇವಾಲ್ ಅವರ ಆರೋಗ್ಯ ತಪಾಸಣಾ ವರದಿಗಳ ಕುರಿತು ವೈದ್ಯಕೀಯ ಮಂಡಳಿಯಿಂದ ಅಭಿಪ್ರಾಯ ಪಡೆಯಲು ಈ ವರದಿಯನ್ನು ಏಮ್ಸ್ ನಿರ್ದೇಶಕರಿಗೆ ಕಳುಹಿಸುವಂತೆ ಕೂಡ ರಿಜಿಸ್ಟ್ರಾರ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು.

ಪ್ರತಿಭಟನಾ ನಿರತರ ರೈತರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಅವರು ಪರಿಹಾರ ದೊರಕುವ ಭರವಸೆಯಲ್ಲಿದ್ದಾರೆ ಎಂಬ ಪಂಜಾಬ್ ಸರಕಾರದ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತು.

ಈಗ ಪ್ರತಿಭಟನಾ ಸ್ಥಳದಿಂದ 10 ಮೀಟರ್ ದೂರದಲ್ಲಿ ರೂಪಿಸಲಾಗಿರುವ ತಾತ್ಕಾಲಿಕ ಆಸ್ಪತ್ರೆಗೆ ದಲ್ಲೇವಾಲ್ ಅವರನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿ ಪ್ರಗತಿ ಸಾಧಿಸಲಾಗಿದೆ ಎಂದು ಪಂಜಾಬ್ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದರು.

ಕೇಂದ್ರ ಸರಕಾರದ ಪ್ರತಿನಿಧಿಗಳು ಕೂಡ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಕೂಡ ಸಿಬಲ್ ಪೀಠಕ್ಕೆ ಮಾಹಿತಿ ನೀಡಿದರು.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) (ರಾಜಕೀಯೇತರ)ದ ಸಂಚಾಲಕರಾಗಿರುವ ಡಲ್ಲೇವಾಲ್ ಅವರು 2024 ನವೆಂಬರ್ 26ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪಂಜಾಬ್ ಸರಕಾರದ ವೈದ್ಯಕೀಯ ನೆರವನ್ನು ನಿರಾಕರಿಸಿದ್ದಾರೆ. ಅವರು ಆರೋಗ್ಯ ಇತ್ತೀಚೆಗೆ ತೀವ್ರ ಹದಗೆಟ್ಟಿದೆ.

ದಿಲ್ಲಿಯಲ್ಲಿ ರೈತರು ನಡೆಸುತ್ತಿದ್ದ ರ್ಯಾಲಿಯನ್ನು ಭದ್ರತಾ ಪಡೆಗಳು ತಡೆದ ನಂತರ ಕಳೆದ ವರ್ಷ ಪೆಬ್ರವರಿ 13ರಿಂದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ಪಂಜಾಬ್ ಹಾಗೂ ಹರಿರ್ಯಾಣ ನಡುವಿನ ಶಂಭು ಹಾಗೂ ಖನೌರಿ ಗಡಿಯಲ್ಲಿ ರೈತರು ಬೀಡು ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News