ಹಮ್ಸಫರ್ ನೀತಿಗೆ ಚಾಲನೆ ನೀಡಿದ ನಿತಿನ್ ಗಡ್ಕರಿ

Update: 2024-10-09 15:24 GMT

ನಿತಿನ್ ಗಡ್ಕರಿ | PC : ANI

ಪುಣೆ : ಮಹತ್ವಾಕಾಂಕ್ಷಿ ಯೋಜನೆಯಾದ ಹಮ್ಸಫರ್ ನೀತಿಗೆ ಮಂಗಳವಾರ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದು, ಈ ನೀತಿಯನ್ವಯ ಹೆದ್ದಾರಿಗಳಲ್ಲಿ ಸ್ವಚ್ಛ ಶೌಚಾಲಯ, ಮಕ್ಕಳ ಆರೈಕೆ ಕೊಠಡಿ ಹಾಗೂ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸುಧಾರಿಸುವ ಗುರಿ ಹೊಂದಲಾಗಿದೆ.

ಈ ಕ್ರಮವು ಪ್ರಯಾಣಿಕರಿಗೆ ಹಿತಕರ ಪ್ರಯಾಣದ ಅನುಭವ ನೀಡುವ ಗುರಿ ಹೊಂದಿದ್ದು, ಇದರೊಂದಿಗೆ ಉದ್ಯಮಶೀಲತೆಯನ್ನು ಉತ್ತೇಜಿಸಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಯನ್ನೂ ಹೊಂದಿದೆ.

ಈ ನೀತಿಯನ್ವಯ ಸ್ವಚ್ಛ ಶೌಚಾಲಯಗಳು, ಮಕ್ಕಳ ಆರೈಕೆ ಕೊಠಡಿಗಳು, ಗಾಲಿ ಕುರ್ಚಿಗಳ ಸೌಲಭ್ಯ, ವಾಹನ ನಿಲುಗಡೆ ಸ್ಥಳಾವಕಾಶ, ಪೆಟ್ರೋಲ್ ಪಂಪ್ ಗಳಲ್ಲಿ ಶೌಚಾಲಯ ಸೌಲಭ್ಯಗಳು ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ಒಳಗೊಂಡಿರಲಿದೆ. ಹಮ್ಸಫರ್ ನೀತಿಯು ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಹಿತಕರ ಪ್ರಯಾಣದ ಅನುಭವವನ್ನು ನೀಡುವ ಗುರಿ ಹೊಂದಿದೆ ಎಂದು ಹೇಳಿದ ನಿತಿನ್ ಗಡ್ಕರಿ, “ಯಾರಾದರೂ ಸುಂಕವನ್ನು ವಸೂಲಿ ಮಾಡುತ್ತಿದ್ದರೆ, ಅಂಥವರು ಪ್ರಯಾಣಿಕರ ಸುರಕ್ಷಿತ ಮತ್ತು ಹಿತಕರ ಪ್ರಯಾಣವನ್ನು ಖಾತರಿ ಪಡಿಸಬೇಕಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ದೇಶಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರಮಾಣೀಕೃತ ಸೇವೆಗಳನ್ನು ಒದಗಿಸಬೇಕಾದ ಪ್ರಾಮುಖ್ಯತೆ ಕುರಿತು ಸಚಿವ ಗಡ್ಕರಿ ಒತ್ತಿ ಹೇಳಿದರು. ಈ ಕ್ರಮದಿಂದ ಸ್ಥಳೀಯವಾಗಿ ಅಂಚಿಗೆ ದೂಡಲ್ಪಟ್ಟಿರುವ ಸಮಾಜಕ್ಕೆ ಲಾಭವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News