3 ಕೋಟಿ ಸ್ಟಾರ್ ಹೆಲ್ತ್ ಗ್ರಾಹಕರ ವೈಯಕ್ತಿಕ ಮಾಹಿತಿ ಆನ್‌ಲೈನ್‌ನಲ್ಲಿ ಮಾರಾಟಕ್ಕಿದೆ!

Update: 2024-10-09 17:48 GMT

Photo: X@StarHealthIns

ಹೊಸದಿಲ್ಲಿ : ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪೆನಿಯ ಸುಮಾರು 3.1 ಕೋಟಿ ಗ್ರಾಹಕರ ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಡಲಾಗಿದೆಯೆಂಬ ಕಳವಳಕಾರಿ ವಿಷಯವನ್ನು ಬ್ಯುಸಿನೆಸ್ ಸ್ಟಾಂಡರ್ಡ್ ಸುದ್ದಿಜಾಲತಾಣ ಬುಧವಾರ ಬಹಿರಂಗಪಡಿಸಿದೆ.

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪೆನಿಯ ಗ್ರಾಹಕರ ಹೆಸರುಗಳು, ವಾಸ್ತವ್ಯ ವಿಳಾಸಗಳು, ದೂರವಾಣಿ ಸಂಖ್ಯೆಗಳು, ಪಾನ್ ಸಂಖ್ಯೆಗಳು, ಪಾಲಿಸಿದಾರರ ನಾಮನಿರ್ದೇಶಿತರು ಹಾಗೂ ವಿಮಾದಾರರ ಖಾಯಿಲೆಗಳ ಕುರಿತು ಮಾಹಿತಿಗಳನ್ನು ಮಾರಾಟಕ್ಕಿಡಲಾಗಿದೆಯೆಂದು ವರದಿಯು ಆಪಾದಿಸಿದೆ.

ತನ್ನ ಗ್ರಾಹಕರ ವೈಯಕ್ತಿಕ ದತ್ತಾಂಶಗಳನ್ನು ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಮೆಸೆಜಿಂಗ್ ಆ್ಯಪ್ ಟೆಲಿಗ್ರಾಂ ಹಾಗೂ ಅಪರಿಚಿತ ಹ್ಯಾಕರ್ ಒಬ್ಬನ ವಿರುದ್ಧ ಸ್ಟಾರ್ ಹೆಲ್ತ್ ಮೊಕದ್ದಮೆ ದಾಖಲಿಸಿದ ಎರಡು ವಾರಗಳ ಬಳಿಕ ಈ ವಿಷಯ ಬಹಿರಂಗವಾಗಿದೆ. ಆದರೆ ಹೊಸತಾಗಿ ಮಾಹಿತಿ ಸೋರಿಕೆಯಾದುದರ ಹಿಂದೆಯೂ ಇದೇ ಹ್ಯಾಕರ್‌ನ ಕೈವಾಡವಿದೆಯೇ ಎಂಬುದು ತಕ್ಷಣವೇ ತಿಳಿದುಬಂದಿಲ್ಲ.

‘ಕ್ಸೆನ್‌ಝೆನ್’ಎಂಬ ಹೆಸರಿನಲ್ಲಿ ಹ್ಯಾಕರ್ ಒಬ್ಬಾತ ವೆಬ್‌ಸೈಟ್ ಒಂದನ್ನು ತೆರೆದಿದ್ದು, ಅವುಗಳಲ್ಲಿನ ದತ್ತಾಂಶಗಳನ್ನು 1.50 ಲಕ್ಷ ಡಾಲರ್ (1.26 ಕೋಟಿ ರೂ.)ಗೆ ಮಾರಾಟಕ್ಕಿಟ್ಟಿದ್ದ. ಮಾಹಿತಿ ಸಣ್ಣ ಪ್ಯಾಕೇಜ್‌ಗೆ ಆತ 10 ಸಾವಿರ ಡಾಲರ್ (ಸುಮಾರು 8.4 ಲಕ್ಷ ರೂ.) ನಿಗದಿಪಡಿಸಿದ್ದನೆಂದು ವರದಿಯು ಹೇಳಿದೆ.

ಸ್ಟಾರ್ ಹೆಲ್ತ್‌ ನ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಅಮರ್‌ಜೀತ್‌ಎಂಬಾತ ನತಗೆ ಈ ದತ್ತಾಂಶಗಳನ್ನು ಮಾರಾಟ ಮಾಡಿದ್ದನೆಂದು ಹ್ಯಾಕರ್ ಹೇಳಿಕೊಂಡಿದ್ದಾನೆ. ಆನಂತರ ಅಮರ್‌ಜಿತ್ ಈ ಮಾರಾಟ ಒಪ್ಪಂದದ ಶರತ್ತುಗಳನ್ನು ಬದಲಾಯಿಸಲು ಯತ್ನಿಸಿದ್ದನೆಂದೂ ಆತ ಹೇಳಿದ್ದಾನೆ. ತನ್ನ ಹಾಗೂ ಅಮರ್‌ಜಿತ್ ನಡುವೆ ಈ ಕುರಿತು ಆನ್‌ಲೈನ್ ಮೂಲಕ ನಡೆದ ಮಾತುಕತೆಗಳು ಹಾಗೂ ಈಮೇಲ್‌ಗಳೆಂದು ತೋರಿಸುವ ವಿಡಿಯೋವನ್ನು ಕೂಡಾ ಆತ ಶೇರ್ ಮಾಡಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News