‘ಒಂದು ದೇಶ ಒಂದು ಚುನಾವಣೆ’ ಮೂಲಕ ನಿರಂಕುಶಪ್ರಭುತ್ವ ಜಾರಿ ಮಾಡುವ ಹುನ್ನಾರ: ನ್ಯಾ.ನಾಗಮೋಹನ್ ದಾಸ್

Update: 2024-10-09 18:35 GMT

ಬೆಂಗಳೂರು: ‘ಒಂದು ದೇಶ ಒಂದು ಚುನಾವಣೆ ಮೂಲಕ ದೇಶದಲ್ಲಿರುವ ಬಹತ್ವವನ್ನು ನಾಶ ಮಾಡಿ ನಿರಂಕುಶ ಪ್ರಭುತ್ವ ಜಾರಿ ಮಾಡುವ ಹುನ್ನಾರವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ‘ಒಂದು ದೇಶ ಒಂದು ಚುನಾವಣೆ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ಜಾರಿ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಸಮಿತಿ ನೀಡುವ ಕಾರಣಗಳು ಸಕಾರಣಗಳಲ್ಲ. ಚುನಾವಣೆ ನೀತಿ ಸಂಹಿತೆಯಿಂದ ಅಭಿವೃದ್ಧಿ ಕುಂಠಿತವಾಗುವುದಿಲ್ಲ. ಸರಕಾರಗಳು ಅದಕ್ಕಿಂತ ಮೊದಲು ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಮಾಡಬಹುದು ಎಂದು ಹೇಳಿದರು.

ರಾಮನಾಥ್ ಕೋವಿಂದ ಸಮಿತಿ ಹೇಳುವಂತೆ ಈಗಿನ ಚುನಾವಣೆಗೆ ಅಧಿಕ ಹಣ ಖರ್ಚು ಮಾಡಲಾಗುತ್ತದೆ. ಅದನ್ನು ಕಡಿಮೆಗೊಳಿಸಲು ಒಂದು ದೇಶ ಒಂದು ಚುನಾವಣೆ ಸಹಾಯಕಗುತ್ತದೆ ಎನ್ನುವುದಾದರೆ, ರಾಜಕೀಯ ಪಕ್ಷಗಳು ಅಭ್ಯುರ್ಥಿ ಖರ್ಚು ಮಾಡವ ಶೇ.90ರಷ್ಟು ಹಣಕ್ಕೆ ಕಡಿವಾಣ ಹಾಕಬೇಕು. ಸರಕಾರ ನೀಡುವ ಶೇ.10ರಷ್ಟು ಹಣಕ್ಕೆ ಅಲ್ಲ ಎಂದು ಹೇಳಿದರು.

ಒಂದು ದೇಶ ಒಂದು ಚುನಾವಣೆಯಿಂದ ದೇಶದಲ್ಲಿ ಅಭದ್ರತೆ ಪ್ರಾರಂಭವಾಗುತ್ತದೆ. ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ವಿಶ್ವಾಸ ಕಳೆದುಕೊಳ್ಳತ್ತವೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನಮ್ಮ ಮುಂದಿನ ಪ್ರಶ್ನೆಗಳು ಬೇರೆ, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿನ ಪ್ರಶ್ನೆಗಳೇ ಬೇರೆಯಾಗಿರುತ್ತವೆ. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಧಿಕಾರವನ್ನು ಕಳೆದುಕೊಳ್ಳುತ್ತೇವೆ. ಪ್ರಮುಖವಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ತಿಳಿಸಿದರು.

ಅಂಕಣಕಾರ ಎ.ನಾರಾಯಣ ಮಾತನಾಡಿ, ‘ಒಂದು ದೇಶ ಒಂದು ಚುನಾವಣೆ ಯಾಕೆಂದರೆ ಕೇಂದ್ರ ಬಿಜೆಪಿ ಸರಕಾರಕ್ಕೆ ರಾಜ್ಯಗಳ ಒಕ್ಕೂಟ ಇಷ್ಟವಿಲ್ಲ. ರಾಜ್ಯಗಳ ನಾಯಕತ್ವವನ್ನು ಮಣಿಸಿ, ದೇಶವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಪ್ರಯತ್ನಕ್ಕೆ ರಾಜ್ಯಗಳು ಅಡ್ಡಿಯಾಗುತ್ತಿವೆ. ಅದಕ್ಕಾಗಿ ದೇಶವನ್ನು ರಾಜ್ಯಮುಕ್ತವನ್ನಾಗಿಸುವ ಹುನ್ನಾರ ಮಾಡಲಾಗುತ್ತಿದೆ. ಇದರಿಂದ ಸಂವಿಧಾನಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಹಿರಿಯ ಮುಖಂಡರಾದ ಎನ್.ವೆಂಕಟೇಶ್, ಎನ್.ಮುನಿಸ್ವಾಮಿ, ಸಂಚಾಲಕ ಮರಿಯಪ್ಪ ಹಳ್ಳಿ, ಪ್ರೊ.ಹುಲ್ಕೆರೆ ಮಹಾದೇವ, ಖಾಜಾಂಚಿ ಗಂಗನಂಜಯ್ಯ, ಸಂಘಟನಾ ಸಂಚಾಲಕ ದಂಡರಮಕ್ಕಿ ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

‘ಒಂದು ದೇಶ ಒಂದು ಚುನಾವಣೆಯ ಮೂಲಕ ಮುಂದೆ ಒಂದು ದೇಶ ಒಂದು ಪಕ್ಷ, ಒಂದು ದೇಶ ಒಬ್ಬನೇ ನಾಯಕ ಎಂದಾಗುತ್ತದೆ. ಅವಾಗ ನಿರಂಕುಶ ಪ್ರಭುತ್ವ ಬರುತ್ತದೆ. ದೇಶದಲ್ಲಿ ಅರಾಜಕತೆ ಉಂಟಾಗಿ, ಕೋಮುವಾದಿ ಶಕ್ತಿಗಳು ಕೇಕೆ ಹಾಕುತ್ತವೆ. ದೇಶದ ಐಕ್ಯತೆ ಇರುವುದು ಬಹುತ್ವದಲ್ಲಿ. ಬಹುತ್ವವನ್ನು ಕಾಪಾಡಿಕೊಂಡು ಏಕ ನೀತಿಯನ್ನು ತಿರಸ್ಕರಿಸಬೇಕು’

-ಎಚ್.ಎನ್.ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿ

‘ಒಂದು ದೇಶ ಒಂದು ಚುನಾವಣೆ ಘೋಷಣೆಯ ಹಿಂದೆ ಸರ್ವಾಧಿಕಾರದ ಹುನ್ನಾರವಿದೆ. ವೈದಿಕ, ಬ್ರಾಹ್ಮಣಶಾಹಿಗಳ ಕಪಿಮುಷ್ಠಿಯು ಪ್ರಜಾಪ್ರಭುತ್ವದ ಕಾರಣದಿಂದ ಸಡಿಲವಾಗುತ್ತಿದೆ. ಅದನ್ನು ಸಹಿಸದೇ ದೇಶದ ದಲಿತರು, ಶೂದ್ರರ ಅವಕಾಶಗಳನ್ನು ತಪ್ಪಿಸುವ ಭಾಗವಾಗಿದೆ’

-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News