ನಾಲ್ಕು ವರ್ಷಗಳಿಂದ ಹೋರಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ: ಪ್ರಧಾನಿ ಮೋದಿಗೆ ಅಂತಿಮ ಮನವಿ ಮಾಡಿದ ಸೋನಂ ವಾಂಗ್ ಚುಕ್

Update: 2024-03-22 09:03 GMT

ಸೋನಂ ವಾಂಗ್ ಚುಕ್ | Photo: X \ @Wangchuk66

ಲೇಹ್: ಹವಾಮಾನ ಹೋರಾಟಗಾರ ಸೋನಂ ವಾಂಗ್ ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು 17ನೇ ದಿನಕ್ಕೆ ಕಾಲಿಟ್ಟಿದೆ. ಅವರು ಲಡಾಖ್ ರಕ್ಷಣೆ ಹಾಗೂ ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಅಂತಿಮ ಮನವಿ ಮಾಡಿದ್ದಾರೆ.

370ನೇ ವಿಧಿ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಿಗೇ ಲಡಾಖ್ ಗೂ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಲಡಾಖ್ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

ಕಾರ್ಗಿಲ್ ಪ್ರಜಾಸತ್ತಾತ್ಮಕ ಮೈತ್ರಿಕೂಟ, ಲೇಹ್ ಉನ್ನತ ಸಂಸ್ಥೆ ಹಾಗೂ ಕೇಂದ್ರ ಸರಕಾರದ ನಡುವಿನ ಮಾತುಕತೆಯು ಮುರಿದು ಬಿದ್ದ ನಂತರ ವಾಂಗ್ ಚುಕ್ 21 ದಿನಗಳ ಹವಾಮಾನ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.

ಲಡಾಖ್ ನ ಭವಿಷ್ಯದ ಕುರಿತು ಚರ್ಚಿಸಲು ಹೊಸ ದಿಲ್ಲಿಯಲ್ಲಿ ನಡೆದ ಹಲವಾರು ಸಭೆಗಳಿಗೆ ಸ್ಥಳೀಯ ನಾಯಕರನ್ನು ಆಹ್ವಾನಿಸಲಾಗಿತ್ತು. ಆದರೆ, ಈ ಹಿಂದಿನ ಸಭೆಗಳಲ್ಲಿ ಯಾವುದೇ ಫಲಪ್ರದ ಫಲಿತಾಂಶ ಹೊರಬರಲಿಲ್ಲ. ಲಡಾಖ್ ಗೆ ರಾಜ್ಯ ಸ್ಥಾನಮಾನ ಹಾಗೂ ಭಾರತೀಯ ಸಂವಿಧಾನದ ಆರನೆ ಪರಿಚ್ಛೇದದಡಿ ರಕ್ಷಣೆ ನೀಡಬೇಕು ಎಂಬ ಮನವಿಯನ್ನು ಗೃಹ ವ್ಯವಹಾರಗಳ ಸಚಿವಾಲಯವು ತಳ್ಳಿ ಹಾಕಿತ್ತು ಎಂದು ವಾಂಗ್ ಚುಕ್ ವಿವರಿಸಿದ್ದಾರೆ.

ತನ್ನ ಹಿಂದಿನ ಪ್ರಣಾಳಿಕೆಗಳಲ್ಲಿ ಬಿಜೆಪಿಯು ಲಡಾಖ್ ಜನತೆಗೆ ಹಲವಾರು ಭರವಸೆಗಳನ್ನು ನೀಡಿತ್ತು. ಬಿಜೆಪಿಯ 2020ರ ಪ್ರಣಾಳಿಕೆಯಲ್ಲಿ ಲಡಾಖ್ ಗೆ ಸಂವಿಧಾನದ ಆರನೇ ಪರಿಚ್ಛೇದದಡಿ ರಕ್ಷಣೆ ಒದಗಿಸುವ ಸ್ಪಷ್ಟ ಭರವಸೆಯನ್ನು ನೀಡಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಸಭೆಗಳಲ್ಲಿ ಕಾಶ್ಮೀರ ಪ್ರಜಾಸತ್ತಾತ್ಮಕ ಮೈತ್ರಿಕೂಟ ಹಾಗೂ ಲೇಹ್ ಉನ್ನತ ಸಂಸ್ಥೆಯ ನಾಯಕರು ಹಲವಾರು ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News