ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕರ್ಫ್ಯೂ ನಡುವೆ ಐಆರ್‌ಬಿ ಯೋಧನ ಹತ್ಯೆ
ಇಂಫಾಲ್: ಮಣಿಪುರದ ಗಡಿ ಭಾಗದ ಪಟ್ಟಣವಾದ ಮೋರೆಹ್ ಎಂಬಲ್ಲಿ ಇಂದು ನಡೆದ ಹಿಂಸಾಚಾರದಲ್ಲಿ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನ ಜವಾನರೊಬ್ಬರು ಮೃತಪಟ್ಟಿದ್ದಾರೆ. ಇಂದಿನ ಹಿಂಸಾಚಾರದ ನಂತರ ಮಣಿಪುರ ಗೃಹ ಇಲಾಖೆಯ ಆಯುಕ್ತರು ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಿ ಈ ಪ್ರದೇಶಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ಶಸ್ತ್ರಾಸ್ತ್ರಗಳನ್ನು ಹೆಲಿಕಾಪ್ಟರ್ ಮೂಲಕ ಒದಗಿಸಬೇಕು ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಒದಗಿಸಬೇಕೆಂದು ಕೋರಿದೆ.
ಕಳೆದ ಎರಡೂವರೆ ತಿಂಗಳುಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಹತ್ಯೆಗೀಡಾದ ಮೈತೈ ಸಮುದಾಯದ ಎರಡನೇ ಭದ್ರತಾ ಸಿಬ್ಬಂದಿ ಇಂದು ಮೃತಪಟ್ಟ ಐಆರ್‌ಬಿ ಜವಾನ ಡಬ್ಲ್ಯು ಸೋಮೊರ್ಜಿತ್ ಆಗಿದ್ದಾರೆ. ಅವರು ಮಣಿಪುರ ಪೊಲೀಸ್ ಕಮಾಂಡೋ ಭಾಗವಾಗಿದ್ದರು. ಇಂದು ಮುಂಜಾನೆ ಸುಮಾರು 3.25ಕ್ಕೆ ನಡೆದ ಹಿಂಸಾಚಾರದಲ್ಲಿ ಅವರು ಹತ್ಯೆಗೀಡಾಗಿದ್ದಾರೆ.
ಘಟನೆ ನಡೆದಾಗ ಅವರು ಕೊಂಡೊಂಗ್ ಲೈರೆಂಬಿ ದೇವಿ ಮಂದಿರದ ನಮೀಪದ ಐಆರ್‌ಬಿ ಪೋಸ್ಟ್‌ನಲ್ಲಿ ನಿಯೋಜಿತರಾಗಿದ್ದರು. ದುಷ್ಕರ್ಮಿಗಳು ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದರು.
ರಾಜ್ಯದ ಗೃಹ ಆಯುಕ್ತ ಟಿ ರಂಜಿತ್ ಸಿಂಗ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಕನಿಷ್ಠ ಏಳು ದಿನಗಳ ಕಾಲ ತುರ್ತು ಸನ್ನಿವೇಶಗಳಲ್ಲಿ ಸಹಾಯಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಇಂಫಾಲದಲ್ಲಿ ಒದಗಿಸುವಂತೆ ಕೋರಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 31ರಂದು ಮಣಿಪುರ ಪೊಲೀಸ್ ಇಲಾಖೆಗೆ ಸೇರಿದ ಎಸ್‌ಡಿಪಿಒ ಚಿಂಗ್ತಮ್ ಆನಂದ್ ಕುಮಾರ್ ಅವರನ್ನು ಮೋರೆಹ್‌ನಲ್ಲಿ ಗುಂಡಿಕ್ಕಿ ಸಾಯಿಸಲಾಗಿತು. ಈ ಸಂಬಂಧ ಪೊಲೀಸರು ಸೋಮವಾರ ಸಂಜೆ ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು. ಈ ಬಂಧನವು ಕುಕಿ ಸಮುದಾಯದಲ್ಲಿ ಆಕ್ರೋಶ ಮೂಡಿಸಿತ್ತು. ಇದರ ಬೆನ್ನಲ್ಲೇ ತೆಂಗ್ನೌಪಲ್ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿತ್ತು. ಮೋರೆಹ್ ಪಟ್ಟಣ ಕೂಡ ಈ ಜಿಲ್ಲೆಯಲ್ಲಿದೆ.
ಬಂಧಿತ ಇಬ್ಬರು ವ್ಯಕ್ತಿಗಳು ಪೊಲೀಸ್ ಅಧಿಕಾರಿಯ ಹತ್ಯೆಯಲ್ಲಿ ಶಾಮೀಲಾಗಿಲ್ಲ, ಅವರನ್ನು 48 ಗಂಟೆಗಳೊಳಗೆ ಬಿಡುಗಡೆಗೊಳಿಸಬೇಕು, ಇಲ್ಲದೇ ಹೋದಲ್ಲಿ “ಏಕಪಕ್ಷೀಯ ಕೋಮುವಾದಿ ಸರ್ಕಾರಕ್ಕೆ ಮೈತೈಗಳಿಗೆ ಮಾತ್ರ ಕುಕಿ-ಝೋ ಪ್ರದೇಶಗಳಲ್ಲಿ ನಿಯೋಜಿಸಲು ಅನುಮತಿಸುವುದಿಲ್ಲ,” ಎಂದು ಕುಕಿ-ಝೋಮಿ ಸಂಘಟನೆಗಳಾದ ಐಟಿಎಲ್‌ಎಫ್ ಮತ್ತು ಸಿಒಟಿಯು ಹೇಳಿದ್ದವು.