ಪ್ಯಾಕೇಜ್ ಮಾಡಲಾದ ಕುಡಿಯುವ ನೀರನ್ನು ʼಹೆಚ್ಚಿನ ಅಪಾಯದ ಆಹಾರ ವರ್ಗʼ ಎಂದು ಘೋಷಿಸಿದ FSSAI
ಹೊಸದಿಲ್ಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಪ್ಯಾಕೇಜ್ ಮಾಡಲಾದ ಕುಡಿಯುವ ಮಿನರಲ್ ವಾಟರ್ ಮತ್ತು ಖನಿಜಯುಕ್ತ ನೀರನ್ನು ʼಹೆಚ್ಚಿನ ಅಪಾಯದ ಆಹಾರ ವರ್ಗʼ ಎಂದು ಪರಿಗಣಿಸಿದ್ದು, ವಾರ್ಷಿಕ ತಪಾಸಣೆಗಳನ್ನು ಕಡ್ಡಾಯಗೊಳಿಸಿದೆ.
ಪ್ಯಾಕ್ ಮಾಡಲಾದ ಕುಡಿಯುವ ಮತ್ತು ಖನಿಜಯುಕ್ತ ನೀರಿನ ಉದ್ಯಮಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಂದ ಪ್ರಮಾಣೀಕರಣ ಪಡೆಯಬೇಕಾದ ಕಡ್ಡಾಯ ಷರತ್ತನ್ನು ತೆಗೆದು ಹಾಕಲು ಸರ್ಕಾರ ತೀರ್ಮಾನ ಮಾಡಿತ್ತು. ಇದರಿಂದ ಕೆಲವು ಉತ್ಪನ್ನಗಳಿಗೆ ಕಡ್ಡಾಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಣ ಅಗತ್ಯವಾಗಿಲ್ಲದ ಕಾರಣ, 'ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮತ್ತು ಮಿನರಲ್ ವಾಟರ್' ಅನ್ನು 'ಅಧಿಕ ಅಪಾಯದ ಆಹಾರ ವರ್ಗಗಳ' ಅಡಿಯಲ್ಲಿ ಪರಿಗಣಿಸಲಾಗುತ್ತದೆ' ಎಂದು FSSAI ಆದೇಶದಲ್ಲಿ ತಿಳಿಸಿದೆ.
ಗ್ರಾಹಕರ ರಕ್ಷಣೆ ಮತ್ತು ಪ್ಯಾಕೇಜ್ ಮಾಡಿದ ನೀರಿನ ಉದ್ಯಮದಲ್ಲಿ ಗುಣಮಟ್ಟ ಕಾಪಾಡಲು ಈ ಆದೇಶ ನೀಡಲಾಗಿದೆ ಎನ್ನಲಾಗಿದೆ. ʼಹೆಚ್ಚಿನ ಅಪಾಯದ ಆಹಾರ ವರ್ಗʼದ ಅಡಿಯಲ್ಲಿ ಬರುವ ಆಹಾರ ಉತ್ಪನ್ನಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಖನಿಜಯುಕ್ತ ನೀರಿನ ತಯಾರಕರು ಪ್ರತಿ ವರ್ಷಕ್ಕೊಮ್ಮೆ ಅಪಾಯ ಆಧಾರಿತ ತಪಾಸಣೆಗೆ ಒಳಗಾಗುತ್ತಾರೆ. ಪರವಾನಗಿ ಅಥವಾ ನೋಂದಣಿಯನ್ನು ನೀಡುವ ಮೊದಲು ಕೂಡ ತಪಾಸಣೆ ನಡೆಸಲಾಗುತ್ತದೆ.