ಗಾಝಾ ಬಿಕ್ಕಟ್ಟಿಗೆ ತಕ್ಷಣ ಸಹಾಯ ಒದಗಿಸುವ ಸುಸ್ಥಿರ ಪರಿಹಾರ ಅಗತ್ಯವಿದೆ: NAM ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್
ಕಂಪಲ: “ಗಾಝಾ ಪಟ್ಟಿಯಲ್ಲಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟಿಗೆ ಅಲ್ಲಿ ತೀವ್ರ ಬಾಧಿತರಾದವರಿಗೆ ತಕ್ಷಣ ಸಹಾಯ ಒದಗಿಸುವ ಸುಸ್ಥಿರ ಪರಿಹಾರ ಬೇಕಿದೆ,” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಉಗಾಂಡಾದ ರಾಜಧಾನಿ ಕಂಪಲದಲ್ಲಿ ನಡೆದ ಅಲಿಪ್ತ ಚಳುವಳಿ (NAM) ಶೃಂಗಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
“ಈ ಕ್ಷಣದಲ್ಲಿ, ಗಾಝಾದಲ್ಲಿನ ಸಂಘರ್ಷ ನಮಗೆ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಅಲ್ಲಿನ ಬಿಕ್ಕಟ್ಟಿಗೆ ತಕ್ಷಣ ಪರಿಹಾರ ಅಗತ್ಯವಿದೆ. ಅದೇ ಸಮಯ ಉಗ್ರವಾದ ಮತ್ತು ಒತ್ತೆಯಾಳು ಇರಿಸುವಿಕೆ ಕೂಡ ಅಸ್ವೀಕಾರ್ಹ ಎಂಬುದು ನಮ್ಮ ಗಮನದಲ್ಲಿರಬೇಕಿದೆ. ಎಲ್ಲಾ ದೇಶಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಬೇಕು. ಸಂಘರ್ಷ ಆ ಪ್ರದೇಶದಾಚೆಗೆ ಹರಡದೇ ಇರುವುದು ಕೂಡ ಮುಖ್ಯವಾಗಿದೆ,” ಎಂದು ಅವರು ಹೇಳಿದರು.
ಎರಡು ರಾಜ್ಯದ ಪರಿಹಾರ ಪ್ರತಿಪಾದಿಸಿದ ಅವರು ಇಂತಹ ಒಂದು ಪರಿಹಾರದಲ್ಲಿ ಫೆಲೆಸ್ತೀನಿ ಜನರು ಸುರಕ್ಷಿತ ಗಡಿಗಳೊಳಗೆ ವಾಸಿಸಬಹುದು ಎಂದರು. “ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ನಾವು ಸಂಘಟಿತರಾಗಿ ಪ್ರಯತ್ನಿಸಬೇಕು,” ಎಂದು ಅವರು ಹೇಳಿದರು.