ಸ್ವಂತ ಮಗನಿಗಿಂತಲೂ ಖರ್ಗೆ ಸಿಎಂ ಆಗುವುದನ್ನು ನೋಡುವ ಆಸೆಯಿತ್ತು : ಎಚ್.ಡಿ ದೇವೇಗೌಡ

Update: 2024-02-08 17:25 GMT

Photo: ಎಚ್.ಡಿ ದೇವೇಗೌಡ(PTI)

ಹೊಸದಿಲ್ಲಿ : "ನನಗೆ ನನ್ನ ಸ್ವಂತ ಮಗನಿಗಿಂತಲೂ ಖರ್ಗೆಯವರು ಸಿಎಂ ಆಗುವುದನ್ನು ನೋಡುವ ಆಸೆಯಿತ್ತು" ಎಂದು ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಗುರುವಾರ ಬಜೆಟ್ ಕಲಾಪದ ವೇಳೆ ಮಾತನಾಡಿದ ಅವರು, ”ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಹಿಂದೆ ಸರಿಯುವುದಾಗಿ ಖರ್ಗೆ ಹೇಳಿಕೆ ನೀಡಿದ್ದಾರೆ. ಖರ್ಗೆ ಪ್ರಾಮಾಣಿಕ ವ್ಯಕ್ತಿ, ಮನಮೋಹನ್ ಸಿಂಗ್ ಕೂಡ ಅಪ್ಪಟ ಪ್ರಾಮಾಣಿಕ ವ್ಯಕ್ತಿ, ಆದರೆ ಕಾಂಗ್ರೆಸ್ ಎಲ್ಲರನ್ನೂ ದುರ್ಬಲಗೊಳಿಸುತ್ತದೆ. ಖರ್ಗೆಯವರು ಉನ್ನತ ಸ್ಥಾನಕ್ಕೆ ಬಂದರೆ ಕಾಂಗ್ರೆಸ್‌ ಸಹಿಸಿಕೊಳ್ಳುವುದೇ?” ಎಂದು ಪ್ರಶ್ನಿಸಿದರು.

“ನನ್ನನ್ನು ಸೋಲಿಸಲು ಕಾಂಗ್ರೆಸ್‌ನವರು ಇನ್ನೊಂದು ಅಭ್ಯರ್ಥಿಯನ್ನು ಹಾಕುವವರಿದ್ದರು. ಆಗ ಮಧ್ಯ ಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆಯವರು, ದೇವೇಗೌಡರನ್ನು ಸೋಲಿಸುವುದಾದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ. ಕಾಂಗ್ರೆಸ್ ಏನೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದು ಮಾಜಿ ಪ್ರಧಾನಿ ಹೇಳಿದರು.

ರಾಜ್ಯಸಭೆಯಲ್ಲಿ ಮೊದಲು ಮಾತನಾಡಿದ್ದ ಪ್ರಧಾನಿ ಮೋದಿಯವರು, ಸಕ್ರೀಯ ರಾಜಕಾರಣದಿಂದ ನಿವೃತ್ತರಾಗುವ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಡಾ ಮನಮೋಹನ್ ಸಿಂಗ್ ಅವರ ಸೇವೆಯನ್ನು ಶ್ಲಾಘಿಸಿದ್ದರು. ಇದನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಅವರ ಬಗ್ಗೆ ಆಡಿದ ಮಾತುಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಒಳ್ಳೆಯ ಕೆಲಸವನ್ನು ಮೆಚ್ಚಿ, ಕೆಟ್ಟದ್ದನ್ನು ಟೀಕಿಸುವ ಗುಣವಿರಬೇಕು” ಎಂದಿದ್ದರು.

ಬಳಿಕ ದೇವೇಗೌಡರನ್ನು ಕುರಿತು ಮಾತನಾಡಿದ ಖರ್ಗೆ, “ದೇವೇಗೌಡರು ಯಾರನ್ನೂ ಹೆಚ್ಚು ಹೊಗಳುವುದಿಲ್ಲ. ಆದರೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ದೇವೇಗೌಡ ಮತ್ತು ನರೇಂದ್ರ ಮೋದಿಯವರ ನಡುವೆ ಸ್ವಲ್ಪ ತಡವಾಗಿ ಪ್ರೇಮಾಂಕುರವಾಗಿದೆ” ಎಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News