2-3 ದಿನದಲ್ಲಿ ಕರಾವಳಿ ಕರ್ನಾಟಕ, ಮಧ್ಯ ಭಾರತದಲ್ಲಿ ಅತ್ಯಂತ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ
ಹೊಸದಿಲ್ಲಿ : ಮುಂದಿನ ಎರಡು- ಮೂರು ದಿನಗಳಲ್ಲಿ ದಕ್ಷಿಣ ರಾಜಸ್ಥಾನ, ಗುಜರಾತ್, ಕೊಂಕಣ, ಗೋವ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಅತಿ ಭಾರಿಯಿಂದ ಅತ್ಯಂತ ಭಾರಿ, ಅಂದರೆ 12.5 ಸೆಂಟಿಮೀಟರ್ನಿಂದ 20 ಸೆಂಟಿಮೀಟರ್ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ಅದೇ ವೇಳೆ, ಈ ವಾರ ದಿಲ್ಲಿ, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಚದುರಿದ ಮತ್ತು ಗುಡುಗುಸಹಿತ ಮಳೆಯಾಗಬಹುದು. ಎರಡು ತೀವ್ರ ಹವಾಮಾನ ವ್ಯವಸ್ಥೆಗಳು ರೂಪುಗೊಂಡಿರುವುದರಿಂದ ಮುಂಗಾರು ಚುರುಕಾಗುತ್ತಿದೆ ಎಂದು ಇಲಾಖೆ ಹೇಳಿದೆ.
ಪೂರ್ವ ಭಾರತದಲ್ಲಿ, ಗಂಗಾ ನದಿ ಆವೃತ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಭಾರೀ, ಅಂದರೆ 6.45 ಸೆಂಟಿ ಮೀಟರ್ನಿಂದ 20 ಸೆಂಟಿಮೀಟರ್ವರೆಗೆ ಮಳೆಯಾಗುವ ನಿರೀಕ್ಷೆಯಿದೆ.
ಹೊಸದಾಗಿ ರೂಪುಗೊಂಡಿರುವ ಹವಾಮಾನ ವ್ಯವಸ್ಥೆಗಳು ರಾಜಸ್ಥಾನ ಮತ್ತು ಗಂಗಾ ನದಿ ಆವೃತ ಪಶ್ಚಿಮ ಬಂಗಾಳದಲ್ಲಿ ಚುರುಕಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎಮ್. ಮೊಹಾಪಾತ್ರ ಹೇಳಿದ್ದಾರೆ. ‘‘ಗುಜರಾತ್ನಲ್ಲಿ ಅತ್ಯಂತ ಭಾರೀ ಮಳೆಯಾಗುತ್ತಿದೆ. ಆ ವಲಯದಲ್ಲಿ ಅತಿ ಭಾರೀ ಮಳೆ ಮುಂದುವರಿಯಲಿದೆ. ಪೂರ್ವ ಭಾರತದಲ್ಲೂ ಭಾರೀ ಮಳೆ ಸುರಿಯಲಿದೆ. ದಿಲ್ಲಿ, ರಾಷ್ಟ್ರೀಯ ರಾಜಧಾನಿ ವಲಯ (ಎನ್ಸಿಆರ್), ಹರ್ಯಾಣ ಮತ್ತು ಪಂಜಾಬ್ನಲ್ಲಿ ಈ ವಾರ ಚುದುರಿದ ಹಾಗೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಿನಕಳೆದಂತೆ ಮಳೆಯ ಪ್ರಮಾಣ ಹೆಚ್ಚಲಿದೆ’’ ಎಂದು ಮೊಹಾಪಾತ್ರ ತಿಳಿಸಿದರು.
ತ್ರಿಪುರದಲ್ಲಿ ಭಾರೀ ಮಳೆಯಿಂದಾಗಿ ಉದ್ಭವಿಸಿದ ಪ್ರವಾಹ ಮತ್ತು ಭೂಕುಸಿತಗಳಲ್ಲಿ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಮತ್ತು 65,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.
ದೇಶದಲ್ಲಿ ಜೂನ್ 1ರ ಬಳಿಕ, ಸರಾಸರಿ 5 ಶೇಕಡ ಹೆಚ್ಚು ಮಳೆ ಸುರಿದಿದೆ. ದಕ್ಷಿಣ ಬಾರತದಲ್ಲಿ 19 ಶೇಕಡ ಮತ್ತು ಮಧ್ಯ ಭಾರತದಲ್ಲಿ 13 ಶೇಕಡ ಹೆಚ್ಚುವರಿ ಮಳೆ ಬಿದ್ದಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ 11 ಶೇ. ಮಳೆ ಕೊರತೆಯಾಗಿದೆ. ವಾಯವ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆ ಸುರಿದಿದೆ.