"ನನ್ನಂತಹ ಅಪ್ಪಂದಿರು ಎಷ್ಟು ಸಮಯದ ತನಕ ಪುತ್ರರನ್ನು ಹೀಗೆ ಕಳೆದುಕೊಳ್ಳಬೇಕು?": ಜಮ್ಮುವಿನಲ್ಲಿ ಗುಂಡಿನ ಚಕಮಕಿಯಲ್ಲಿ ಹುತಾತ್ಮನಾದ ಯೋಧನ ತಂದೆಯ ಪ್ರಶ್ನೆ
ಹೊಸದಿಲ್ಲಿ: “ನನ್ನಂತಹ ಅಪ್ಪಂದಿರು ಎಷ್ಟು ಸಮಯದ ತನಕ ನಮ್ಮ ಪುತ್ರರನ್ನು ಕಳೆದುಕೊಳ್ಳುತ್ತಾ ಇರಬೇಕು?,” ಎಂಬ ಪ್ರಶ್ನೆಯನ್ನು ಕಳೆದ ಶನಿವಾರ ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ದೀಪಕ್ (34) ಅವರ ತಂದೆ ಸುರೇಶ್ ರಾಯ್ ಸರ್ಕಾರವನ್ನು ಪ್ರಶ್ನಿಸುತ್ತಾರೆ.
ಬಿಹಾರದ ಬನಿಯಾಪುರದಲ್ಲಿರುವ ಲವ್ವನ್ ಕಲನ್ ಗ್ರಾಮದ ನಿವಾಸಿಯಾಗಿರುವ ಸುರೇಶ್ ಅವರ ಹಿರಿಯ ಪುತ್ರ ಕೂಡ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ದೀಪಕ್ ತಮ್ಮ ಪತ್ನಿ ಹಾಗೂ ಒಂಬತ್ತು ವರ್ಷದ ಪುತ್ರನನ್ನು ಅಗಲಿದ್ದಾರೆ.
ದೀಪಕ್‌ನ ಕುಟುಂಬವನ್ನು ನೋಡಿಕೊಳ್ಳುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. “ದೀಪಕ್ ಬಳಿ ಹೆಚ್ಚು ಉಳಿತಾಯವಿರಲಿಲ್ಲ, ನನಗೆ ಆಗಾಗ ಹಣ ಕಳುಹಿಸುತ್ತಿದ್ದ. ಆತನಿಗೂ ಕುಟುಂಬದ ಜವಾಬ್ದಾರಿಯಿತ್ತು. ಗ್ರಾಮದಲ್ಲಿ ಒಳ್ಳೆಯ ಮನೆ ಕಟ್ಟಬೇಕೆಂಬ ಕನಸು ಆತನಿಗಿತ್ತು. ಆದರೆ ಅಷ್ಟೊಂದು ಹಣ ಆತನ ಬಳಿ ಇರಲಿಲ್ಲ,” ಎಂದು ಅವರು ಹೇಳುತ್ತಾರೆ.
ಎರಡು ಬಿಘಾ ಕೃಷಿ ಭೂಮಿ ಹೊಂದಿರುವ ಸುರೇಶ್, ಜಮ್ಮು ಕಾಶ್ಮೀರದಲ್ಲಿ ಉಗ್ರವಾದದ ಸಮಸ್ಯೆಗೆ ದೀರ್ಘಕಾಲೀನ ಪರಿಹಾರಕ್ಕೆ ಕೇಂದ್ರ ಸರ್ಕಾರ ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ.