ಮಾನವ ಕಳ್ಳ ಸಾಗಣೆ ಪ್ರಕರಣ : ಐದು ಮಂದಿ ವಿದೇಶಿಯರ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದ ಎನ್ಐಎ
ಹೊಸದಿಲ್ಲಿ: ಅಸ್ಸಾನಲ್ಲಿ ನಡೆದಿದ್ದ ಮಾನವ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶದ ಐವರು ಪ್ರಜೆಗಳು ಸೇರಿದಂತೆ ಒಟ್ಟು 24 ಮಂದಿ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಿರುಚಿದ ದಾಖಲೆಗಳನ್ನು ಬಳಸಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನ ರೊಹಿಂಗ್ಯಾ ಪ್ರಜೆಗಳ ಮಾನವ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಅಂತಾರಾಷ್ಟ್ರೀಯ ಗುಂಪಿನ ಕಾರ್ಯಾಚರಣೆಯ ವಿರುದ್ಧ ಗುವಾಹಟಿಯ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಎನ್ಐರಎ ವಕ್ತಾರರು ಹೇಳಿದ್ದಾರೆ.
ಬಾಂಗ್ಲಾದೇಶದ ನಾಲ್ವರು ಹಾಗೂ ಮ್ಯಾನ್ಮಾರ್ ನ ಓರ್ವ ಪ್ರಜೆ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳು, ವಿದೇಶಿ ಪ್ರಜೆಗಳ ಕಾಯ್ದೆ ಹಾಗೂ ಪಾಸ್ ಪೋರ್ಟ್ (ಭಾರತದೊಳಕ್ಕೆ ಪ್ರವೇಶ) ಕಾಯ್ದೆ ಮತ್ತು ನಿಯಮಗಳಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಸ್ಸಾಂ, ತ್ರಿಪುರ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳದ 39 ಸ್ಥಳಗಳ ಮೇಲೆ ಭಾರಿ ಸಂಯೋಜಿತ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳವು ಆರಂಭದಲ್ಲಿ ಒಟ್ಟು 29 ಮಂದಿಯನ್ನು ಬಂಧಿಸಿತ್ತು.
ಈ ದಾಳಿಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ನಕಲಿ ದಾಖಲೆಗಳು, ತಿರುಚಿದ ಭಾರತೀಯ ಗುರುತಿನ ದಾಖಲೆಗಳು, ಬ್ಯಾಂಕ್ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಬೆನ್ನಿಗೇ, ಡಿಸೆಂಬರ್ ತಿಂಗಳಲ್ಲಿ ತ್ರಿಪುರಾದಲ್ಲಿ ಮತ್ತೆ ನಾಲ್ವರನ್ನು ಬಂಧಿಸುವುದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆಯು 33ಕ್ಕೆ ಏರಿಕೆಯಾಗಿತ್ತು.