ನಾವು ಸುಳ್ಳು ಪ್ರಚಾರ ಮಾಡುತ್ತಿದ್ದರೆ ನಮಗೆ ಮರಣ ದಂಡನೆ ವಿಧಿಸಿ: ಬಾಬಾ ರಾಮದೇವ್ ಹೇಳಿಕೆ

Update: 2023-11-22 14:18 GMT

ಬಾಬಾ ರಾಮದೇವ್ | Photo: PTI

ಹೊಸದಿಲ್ಲಿ: ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹಿರಾತುಗಳನ್ನು ಪ್ರಸಾರ ಮಾಡುತ್ತಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ಎಚ್ಚರಿಕೆ ನೀಡಿದ ಮರುದಿನವೇ, “ಆಧುನಿಕ ವೈದ್ಯಕೀಯ ಪದ್ಧತಿಯ ಕೆಲವು ವೈದ್ಯರ ಗುಂಪು ತಮ್ಮ ಕಂಪನಿಯ ವಿರುದ್ಧ ಸುಳ್ಳು ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿದೆ” ಎಂದು ಬಾಬಾ ರಾಮದೇವ್ ಆರೋಪಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಬುಧವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕ ರಾಮದೇವ್, “ವೈದ್ಯರ ಗುಂಪೊಂದು ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ನಮ್ಮ ಸನಾತನ ಮೌಲ್ಯಗಳ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ. ಈ ಸುಳ್ಳು ಕಾರ್ಯಸೂಚಿಯು ರಕ್ತದೊತ್ತಡ, ಮಧುಮೇಹ, ಅಸ್ತಮಾ, ಕೀಲು ನೋವು, ಯಕೃತ್ತು ಕಾಯಿಲೆ, ಮೂತ್ರಪಿಂಡ ವೈಫಲ್ಯ ಇನ್ನಿತರ ಕಾಯಿಲೆಗಳಿಗೆ ರಾಸಾಯಿಕ ಜಗತ್ತಿನಲ್ಲಿ ಪರಿಹಾರವೇ ಇಲ್ಲ ಎಂದು ಪ್ರತಿಪಾದಿಸುತ್ತಿದೆ” ಎಂದು ಆರೋಪಿಸಿದರು.

ಜನರನ್ನು ಪತಂಜಲಿ ಔಷಧಗಳ ಮೂಲಕ ಗುಣಪಡಿಸಿರುವುದಕ್ಕೆ ನಮ್ಮ ಕಂಪನಿಯ ಬಳಿ ಸಮರ್ಥನೀಯ ನೈಜ ಜಗತ್ತು ಹಾಗೂ ವೈಜ್ಞಾನಿಕ ಪುರಾವೆಗಳಿವೆ ಎಂದು ಬಾಬಾ ರಾಮದೇವ್ ಪ್ರತಿಪಾದಿಸಿದರು.

“ನಾವು ಯೋಗ, ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಯಲ್ಲಿ ಸಮಗ್ರ ಹಾಗೂ ಪುರಾವೆ ಆಧಾರಿತ ಚಿಕಿತ್ಸಾ ವ್ಯವಸ್ಥೆಗಳ ಮೂಲಕ ಟೈಪ್ 1 ಮಧುಮೇಹ, ಥೈರಾಯ್ಡ್ ಸಮಸ್ಯೆ, ಅತಿ ರಕ್ತದೊತ್ತಡ, ಸಕ್ಕರೆ ಪ್ರಮಾಣವನ್ನು ಸಹಜಗೊಳಿಸುವುದು, ಸ್ಥೂಲಕಾಯ ಹಾಗೂ ಇನ್ನಿತರ ಕಾಯಿಲೆಗಳನ್ನು ಗುಣ ಪಡಿಸುತ್ತೇವೆ. ಇದು ಸುಳ್ಳಲ್ಲ; ನಿಜ” ಎಂದು ರಾಮದೇವ್ ವಾದಿಸಿದರು.

“ಒಂದು ವೇಳೆ ನಾವೇನಾದರೂ ಸುಳ್ಳು ಪ್ರಚಾರ ಮಾಡುತ್ತಿದ್ದರೆ ನಮ್ಮ ವಿರುದ್ಧ ಗರಿಷ್ಠ ಶಿಕ್ಷೆಯನ್ನು ವಿಧಿಸಿ. ಮರಣ ದಂಡನೆಯನ್ನು ನೀಡಿ. ನಮಗೆ ಅದರ ಬಗ್ಗೆ ಸಮ್ಮತಿಯಿದೆ” ಎಂದೂ ಅವರು ಹೇಳಿದರು.

ಇದೇ ವೇಳೆ, “ದೇಶದ ನ್ಯಾಯಾಂಗ ವ್ಯವಸ್ಥೆಯಾದ ಸುಪ್ರೀಂ ಕೋರ್ಟ್ ಹಾಗೂ ಸಂವಿಧಾನದ ಬಗ್ಗೆ ನಮಗೆ ಸಂಪೂರ್ಣ ಗೌರವವಿದೆ. ನಾವು ಸುಳ್ಳು ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ” ಎಂದು ಉದ್ಯಮಿ ಹಾಗೂ ಯೋಗ ಗುರುವಾದ ರಾಮದೇವ್ ಸ್ಪಷ್ಟಪಡಿಸಿದರು.

ತಮ್ಮ ಸಂಸ್ಥೆಯ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಪ್ರಾಧಿಕಾರಗಳು ಕಾನೂನು ಕ್ರಮ ಜರುಗಿಸಬೇಕು ಎಂದೂ ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News