ದೇವಸ್ಥಾನ ಭೇಟಿ ವಿವಾದ: ಗರ್ಭಗುಡಿಗೆ ಪ್ರವೇಶ ನಿರಾಕರಣೆ ವದಂತಿ ಕುರಿತು ಇಳಯರಾಜ ಹೇಳಿದ್ದೇನು?
ಚೆನ್ನೈ: ರವಿವಾರ ತಾನು ದಕ್ಷಿಣ ತಮಿಳುನಾಡಿನ ಶ್ರೀವಿಲ್ಲಿಪುದೂರಿನ ಪ್ರಸಿದ್ಧ ಆಂಡಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗರ್ಭಗುಡಿ ಪ್ರವೇಶಿಸಲು ಅನುಮತಿ ನಿರಾಕರಿಸಿ ತನ್ನನ್ನು ಅವಮಾನಿಸಲಾಗಿತ್ತು ಎಂಬ ವರದಿಗಳನ್ನು ಖ್ಯಾತ ಸಂಗೀತ ಸಂಯೋಜಕ ಇಳಯರಾಜ ನಿರಾಕರಿಸಿದ್ದಾರೆ.
ಎಕ್ಸ್‌ನಲ್ಲಿ ಸ್ಪಷ್ಟೀಕರಣವನ್ನು ಪೋಸ್ಟ್ ಮಾಡಿರುವ ಇಳಯರಾಜ, ‘ಕೆಲವರು ನನ್ನನ್ನು ಕೇಂದ್ರವಾಗಿಸಿಕೊಂಡು ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳುವ ವ್ಯಕ್ತಿಯಲ್ಲ ಮತ್ತು ನಾನು ರಾಜಿಯನ್ನು ಮಾಡಿಕೊಳ್ಳುವುದೂ ಇಲ್ಲ. ನಡೆದೇ ಇರದ ಘಟನೆಯನ್ನು ನಡೆದಿರುವಂತೆ ಸುದ್ದಿಯನ್ನು ಅವರು ಹರಡುತ್ತಿದ್ದಾರೆ. ನನ್ನ ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ವದಂತಿಗಳನ್ನು ನಂಬಬಾರದು’ ಎಂದು ತಿಳಿಸಿದ್ದಾರೆ.
ಬಳಿಕ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯೂ ದೇವಸ್ಥಾನದಲ್ಲಿಯ ಶಿಷ್ಟಾಚಾರಗಳ ಕುರಿತು ಸ್ಪಷ್ಟೀಕರಣವನ್ನು ನೀಡಿದ್ದು, ಅರ್ಚಕರು ಮತ್ತು ಜೀಯಾರ್ ಹೊರತುಪಡಿಸಿ ಬೇರೆ ಯಾರಿಗೂ ಗರ್ಭಗುಡಿಗೆ ಹೋಗುವ ಅರ್ಥ ಮಂಡಪಮ್‌ಗೆ ಪ್ರವೇಶಕ್ಕೆ ಅವಕಾಶವಿಲ್ಲ. ದೇವಾಲಯದ ಆಂಡಾಳ್ ಸನ್ನಿಧಿ ಅಥವಾ ಆಂಡಾಳ್ ವಿಭಾಗದಲ್ಲಿ ಭಕ್ತರು ಅರ್ಥ ಮಂಡಪಮ್‌ನ ಹೊರಗಿನ ವಸಂತ ಮಂಡಪಮ್‌ನಿಂದ ಮಾತ್ರ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಆಂಡಾಳ್ ದೇವಿಯನ್ನು ಸ್ತುತಿಸಿ 12 ಆಳ್ವಾರ್‌ಗಳು ರಚಿಸಿರುವ ತಮಿಳು ಶ್ಲೋಕಗಳ ಸಂಕಲನವಾಗಿರುವ ತನ್ನ ಸಂಗೀತ ಸಂಯೋಜನೆಯ‘ದಿವ್ಯ ಪಶುರಂ’ ಬಿಡುಗಡೆಗೆ ಮುನ್ನ ಇಳಯರಾಜ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಲ್ಬಮ್‌ನಲ್ಲಿಯ ಮೊದಲ ಗೀತೆಯನ್ನು ಸ್ವತಃ ಇಳಯರಾಜಾ ಹಾಡಿದ್ದಾರೆ.
ಇಳಯರಾಜಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶದ ನಿರಾಕರಣೆಯು ವಿವಾದವನ್ನು ಸೃಷ್ಟಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹಲವಾರು ವೀಡಿಯೊಗಳು ಇಳಯರಾಜ ದೇವಸ್ಥಾನದ ಗರ್ಭಗುಡಿಯ ಎದುರಿನ ಅರ್ಥ ಮಂಡಪಂ ಪ್ರವೇಶಿಸದಂತೆ ದೇವಳದ ಅಧಿಕಾರಿಗಳು ತಡೆಯುತ್ತಿರುವುದನ್ನು ತೋರಿಸಿವೆ.
ಇಳಯರಾಜಾ ಶ್ರೀ ಆಂಡಾಳ್ ಜೀಯಾರ ಮಠದ ಸಡಗೋಪ ರಾಮಾನುಜ ಜೀಯಾರ್ ಮತ್ತು ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯಾರ್ ಸ್ವಾಮಿ ಅವರೊಂದಿಗೆ ದೇವಸ್ಥಾನವನ್ನು ಪ್ರವೇಶಿಸಿದ್ದು,ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಜಂಟಿ ಆಯುಕ್ತ ಕೆ.ಸೆಲ್ಲಥುರೈ ಅವರನ್ನು ಬರಮಾಡಿಕೊಂಡಿದ್ದರು. ಇಳಯರಾಜ ಅರ್ಥ ಮಂಡಪಂ ಪ್ರವೇಶಿಸುತ್ತಿದ್ದಂತೆ ಅಧಿಕಾರಿಗಳು ದೇವಸ್ಥಾನದ ಶಿಷ್ಟಚಾರಗಳನ್ನು ಉಲ್ಲೇಖಿಸಿ ಹೊರಗೆ ಹೋಗುವಂತೆ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಇಳಯರಾಜ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು ಎಂಬ ಆರೋಪಗಳನ್ನು ವೀಡಿಯೊಗಳು ಹುಟ್ಟು ಹಾಕಿದ್ದವು.