ಅಕ್ಕಿ ರಫ್ತು ನಿಷೇಧ ಹಿಂಪಡೆಯಲು ಭಾರತಕ್ಕೆ ಐಎಂಎಫ್ ಮುಖ್ಯ ಆರ್ಥಿಕ ತಜ್ಞರ ಆಗ್ರಹ

Update: 2023-07-27 16:05 GMT

Photo: PTI

ಹೊಸದಿಲ್ಲಿ: ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲೆ ಭಾರತದ ನಿರ್ಬಂಧವು ಜಾಗತಿಕ ಆಹಾರ ಬೆಲೆ ಹಣದುಬ್ಬರವನ್ನು ಹೆಚ್ಚಿಸಬಹುದು ಮತ್ತು ಅದು ಈ ನಿರ್ಬಂಧವನ್ನು ಹಿಂದೆಗೆದುಕೊಳ್ಳಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯ ಆರ್ಥಿಕ ತಜ್ಞ ಪಿಯರೆ ಆಲಿವಿಯೆರ್ ಗುಹಾಶಾ ಅವರು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಕ್ರಮವು ಉಕ್ರೇನ್ ಕಪ್ಪು ಸಮುದ್ರ ಧಾನ್ಯ ರಪ್ತು ಒಪ್ಪಂದದ ಅಮಾನತಿನಂತಹುದೇ ಪರಿಣಾಮವನ್ನು ಬೀರುತ್ತದೆ ಮತ್ತು ಇತರ ದೇಶಗಳಲ್ಲಿ ಧಾನ್ಯ ಬೆಲೆಗಳ ಏರಿಕೆಗೆ ಕಾರಣವಾಗುತ್ತದೆ. ಅವು ಈ ವರ್ಷ ಶೇ.10ರಿಂದ ಶೇ.15ರಷ್ಟು ಏರಿಕೆಯಾಗಬಹುದು ಎಂದು ಹೇಳಿದರು.

‘ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ನಿರ್ಬಂಧಗಳು ಜಗತ್ತಿನ ಉಳಿದೆಡೆಗಳಲ್ಲಿ ಆಹಾರ ಬೆಲೆಗಳಲ್ಲಿ ಏರಿಳಿತಗಳನ್ನು ಉಲ್ಬಣಗೊಳಿಸುತ್ತವೆ ಮತ್ತು ಪ್ರತೀಕಾರದ ಕ್ರಮಗಳಿಗೂ ಕಾರಣವಾಗಬಹುದು. ಇಂತಹ ರಫ್ತು ನಿರ್ಬಂಧಗಳನ್ನು ತೆಗೆದುಹಾಕಲು ನಾವು ಉತ್ತೇಜಿಸುತ್ತೇವೆ, ಏಕೆಂದರೆ ಅವು ಜಾಗತಿಕವಾಗಿ ಹಾನಿಕಾರಕವಾಗುತ್ತವೆ’ ಎಂದು ಗುಹಾಶಾ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಮುಂಗಾರು ಮಳೆಯು ಭತ್ತದ ಪೈರಿಗೆ ಹಾನಿಯನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಕ್ಕಿಯ ಅಭಾವ ತಲೆದೋರಬಹುದು ಎಂಬ ಆತಂಕದಿಂದ ಕೇಂದ್ರ ಸರಕಾರವು ಜು.20ರಂದು ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News