ಪ್ರಧಾನಿ ಮೋದಿಯ ಜಾರ್ಖಂಡ್ ಭೇಟಿ ವೇಳೆ ಭದ್ರತಾ ಲೋಪ: ಮೂವರು ಪೊಲೀಸ್ ಅಧಿಕಾರಿಗಳ ಅಮಾನತು
ರಾಂಚಿ: ಪ್ರಧಾನಿ ಮೋದಿಯವರ ರಾಂಚಿ ಭೇಟಿಯ ವೇಳೆ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯದತ್ತ ತೆರಳುವಾಗ, ಮಹಿಳೆಯೊಬ್ಬರು ಅನಿರೀಕ್ಷಿತವಾಗಿ ಪ್ರಧಾನಿಯವರ ಬೆಂಗಾವಲು ಪಡೆ ಎದುರು ಓಡಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ, ಪ್ರಧಾನಿಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಕೂಡಲೆ ಆ ಮಹಿಳೆಯನ್ನು ಸೆರೆ ಹಿಡಿದು, ತಮ್ಮ ವಶಕ್ಕೆ ಪಡೆದಿದ್ದರು.
“ಕರ್ತವ್ಯ ಲೋಪವೆಸಗಿದ್ದಕ್ಕಾಗಿ ಓರ್ವ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ” ಪೊಲೀಸ್ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಅಬು ಝಫರ್, ಪೇದೆಗಳಾದ ಛೋಟೆಲಾಲ್ ತುಡು ಹಾಗೂ ರಂಜನ್ ಕುಮಾರ್ ಅಮಾನತುಗೊಂಡಿರುವ ಪೊಲೀಸರಾಗಿದ್ದಾರೆ.
ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾರ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಎರಡು ದಿನಗಳ ಕಾಲ ಝಾರ್ಖಂಡ್ ಗೆ ಭೇಟಿ ನೀಡಿದ್ದಾರೆ.