ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ನಡೆಸಿದೆಯೇ ಎಂಬ ಬಗ್ಗೆ ತನಿಖೆ: ಕೆನಡ
ಒಟ್ಟಾವ: ಕೆನಡದ ಚುನಾವಣೆಯಲ್ಲಿ ನಡೆದಿದೆಯೆನ್ನಲಾದ ಹಸ್ತಕ್ಷೇಪದ ಬಗ್ಗೆ ನಡೆಯುತ್ತಿರುವ ತನಿಖೆಯ ವ್ಯಾಪ್ತಿಗೆ ಆ ದೇಶದ ಸರಕಾರವು ಭಾರತವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದೆ. ಇದರೊಂದಿಗೆ ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯು ಉಲ್ಬಣಗೊಂಡಿದೆ.
2019 ಮತ್ತು 2021ರಲ್ಲಿ ಕೆನಡದಲ್ಲಿ ನಡೆದ ರಾಷ್ಟ್ರೀಯ ಚುನಾವಣೆಗಳಲ್ಲಿ ನಡೆದಿದೆಯೆನ್ನಲಾದ ವಿದೇಶಿ ಹಸ್ತಕ್ಷೇಪದ ಬಗ್ಗೆ ಆ ದೇಶ ನಡೆಸುತ್ತಿರುವ ತನಿಖೆಯು, ಆ ಚುನಾವಣೆಗಳಲ್ಲಿ ಭಾರತವು ಹಸ್ತಕ್ಷೇಪ ನಡೆಸಿದೆಯೇ, ಇಲ್ಲವೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದೆ ಎಂದು ‘ಬ್ಲೂಮ್ಬರ್ಗ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಗುಪ್ತಚರ ದಾಖಲೆಗಳು ಮಾಧ್ಯಮಗಳಿಗೆ ಸೋರಿಕೆಯಾದ ಬಳಿಕ ಪ್ರಧಾನಿ ಜಸ್ಟಿನ್ ಟ್ರೂಡೊ ತನಿಖೆಗೆ ಆದೇಶ ನೀಡಿದ್ದರು. ಕೆನಡದ ಚುನಾವಣೆಯಲ್ಲಿ, ತನ್ನೊಂದಿಗೆ ಸ್ನೇಹ ಹೊಂದಿರುವ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಚೀನಾ ಸರಕಾರವು ಹಸ್ತಕ್ಷೇಪ ನಡೆಸಿತ್ತು ಎಂಬುದಾಗಿ ಸೋರಿಕೆಯಾಗಿರುವ ದಾಖಲೆಗಳು ಹೇಳಿದ್ದವು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರದ ಶಾಮೀಲಾತಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂಬುದಾಗಿ ತನಿಖಾ ಆಯೋಗವು ಬುಧವಾರ ಸ್ಪಷ್ಟಪಡಿಸಿದೆ.
ಕೆನಡದ ಚುನಾವಣೆಯಲ್ಲಿ ಚೀನಾ, ರಶ್ಯ ಹಾಗೂ ಇತರ ಸರಕಾರಿ ಅಥವಾ ಸರಕಾರೇತರ ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಆರೋಪಗಳು ಈಗಾಗಲೇ ಕೇಳಿಬಂದಿದ್ದರೂ, ಭಾರತವನ್ನು ಇದಕ್ಕೆ ಎಳೆಯಲಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಕೆನಡದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಆರೋಪಗಳ ಜೊತೆಗೆ, ಕೆನಡದಾದ್ಯಂತ ಅಕ್ರಮ ಪೊಲೀಸ್ ಠಾಣೆಗಳನ್ನು ತೆರೆದಿದೆ ಎಂಬ ಆರೋಪಗಳನ್ನೂ ಚೀನಾ ಎದುರಿಸುತ್ತಿದೆ. ಈ ಪೊಲೀಸ್ ಠಾಣೆಗಳು ಪಬ್ಲಿಕ್ ಸೆಕ್ಯುರಿಟಿ ಬ್ಯೂರೋ (ಪಿಎಸ್ಬಿ) ಜೊತೆಗೆ ಸಂಯೋಜನೆ ಹೊಂದಿವೆ ಹಾಗೂ ಚೀನಾ ವಿರೋಧಿಗಳನ್ನು ದಮನಿಸಲು ಅವುಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಪಿಸಲಾಗಿದೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ವಹಿಸಿರುವ ಪಾತ್ರದ ಬಗ್ಗೆ ‘‘ವಿಶ್ವಾಸಾರ್ಹ ಆರೋಪ’’ಗಳಿವೆ ಎಂಬುದಾಗಿ ಟ್ರೂಡೊ ಕೆನಡ ಸಂಸತ್ ನಲ್ಲಿ ಹೇಳಿದ ಬಳಿಕ, ಭಾರತ ಮತ್ತು ಕೆನಡ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ.
ಈ ಆರೋಪದ ಬಳಿಕ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವೈರತ್ವವು ಪರಾಕಾಷ್ಠೆಗೆ ತಲುಪಿತ್ತು. ಉಭಯ ದೇಶಗಳು ಪರಸ್ಪರರ ರಾಜತಾಂತ್ರಿಕರ ಸರಣಿ ಉಚ್ಚಾಟನೆ ಮಾಡಿದ್ದವು.