ವಿಶ್ವಸಂಸ್ಥೆಯಲ್ಲಿ ಇಸ್ರೇಲ್-ಫೆಲೆಸ್ತೀನ್‌ಗಾಗಿ ದ್ವಿ-ರಾಷ್ಟ್ರ ಪರಿಹಾರಕ್ಕೆ ಬೆಂಬಲ ಪುನರುಚ್ಛರಿಸಿದ ಭಾರತ
ಹೊಸದಿಲ್ಲಿ : ಫೆಲೆಸ್ತೀನ್ ವಿವಾದದ ಶಾಂತಿಯುತ ಪರಿಹಾರಕ್ಕೆ ತನ್ನ ಐತಿಹಾಸಿಕ ಮತ್ತು ಅಚಲ ಬದ್ಧತೆಯನ್ನು ಪುನರುಚ್ಛರಿಸಿರುವ ಭಾರತವು, ಇಸ್ರೇಲ್ ಮತ್ತು ಫೆಲೆಸ್ತೀನ್ ಪರಸ್ಪರ ಶಾಂತಿಯಿಂದ ಬಾಳಲು ಹಾಗೂ ಸಾರ್ವಭೌಮ ಮತ್ತು ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಗಾಗಿ ದ್ವಿ-ರಾಷ್ಟ್ರ ಪರಿಹಾರವನ್ನು ಬೆಂಬಲಿಸಿದೆ.
ಶುಕ್ರವಾರ ಫೆಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆ ಏಜೆನ್ಸಿ(ಯುಎನ್‌ಆರ್‌ಡಬ್ಲ್ಯುಎ)ಯ ಸಮ್ಮೇಳನದಲ್ಲಿ ಚಾರ್ಜ್ ಡಿ ಅಫೇರ್ಸ್ ಹಾಗೂ ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಕಾಯಂ ಪ್ರತಿನಿಧಿಯಾಗಿರುವ ರಾಯಭಾರಿ ಆರ್.ರವೀಂದ್ರ ಅವರು ಈ ಕುರಿತು ಹೇಳಿಕೆಯನ್ನು ನೀಡಿದರು.
ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಭಾರತವು ತತ್ವಬದ್ಧ ನಿಲುವನ್ನು ತೆಗೆದುಕೊಂಡಿದೆ ಮತ್ತು ನಾಗರಿಕರ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸಾವುಗಳನ್ನು ತೀವ್ರವಾಗಿ ಖಂಡಿಸಿದೆ ಎಂದು ಅವರು ಹೇಳಿದರು.
‘ಕಳೆದ ವರ್ಷ ಅ.7ರಂದು ನಡೆದಿದ್ದ ಅನಾಗರಿಕ ದಾಳಿಯು ನಮ್ಮ ನಿಸ್ಸಂದಿಗ್ಧ ಖಂಡನೆಗೆ ಅರ್ಹವಾಗಿದೆ ಮತ್ತು ಎಲ್ಲ ಒತ್ತೆಯಾಳುಗಳನ್ನು ಬೇಷರತ್ ಬಿಡುಗಡೆ ಮಾಡುವಂತೆ ನಾವು ಆಗ್ರಹಿಸುತ್ತೇವೆ’ ಎಂದು ಹಮಾಸ್ ಹೋರಾಟಗಾರರಿಂದ ಇಸ್ರೇಲ್ ಮೇಲಿನ ದಾಳಿಯನ್ನು ಉಲ್ಲೇಖಿಸಿ ಅವರು ಹೇಳಿದರು.
ಭಾರತವು ಫೆಲೆಸ್ತೀನ್ ಜನರಿಗೆ ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರನಾಗಿದೆ ಎಂದು ಒತ್ತಿ ಹೇಳಿದ ಅವರು, ವರ್ಷಗಳಿಂದ ಭಾರತವು ಫೆಲೆಸ್ತೀನ್‌ಗೆ ವಿವಿಧ ರೂಪಗಳಲ್ಲಿ ಸುಮಾರು 120 ಮಿಲಿಯನ್ ಡಾಲರ್ ಗಳ ಅಭಿವೃದ್ಧಿ ನೆರವನ್ನು ಒದಗಿಸಿದೆ. ಇದರಲ್ಲಿ ಯುಎನ್‌ಆರ್‌ಡಬ್ಲ್ಯುಎಗೆ ಕೊಡುಗೆಯಾಗಿ ನೀಡಿರುವ 35 ಮಿಲಿಯನ್ ಡಾಲರ್ ಗಳು ಸೇರಿವೆ. ಭಾರತವು ಪ್ರತಿವರ್ಷ ಯುಎನ್‌ಆರ್‌ಡಬ್ಲ್ಯುಎ ಗೆ ಐದು ಮಿಲಿಯನ್ ಡಾಲರ್ ಗಳ ಕೊಡುಗೆಯನ್ನು ನೀಡುತ್ತಿದೆ ಮತ್ತು ಅದು ಈ ವರ್ಷವೂ ಮುಂದುವರಿಯಲಿದೆ ಎಂದರು.