ಕೆನಡಾ ಚುನಾವಣೆಗಳಲ್ಲಿ ತನ್ನ ಹಸ್ತಕ್ಷೇಪದ ಆರೋಪಗಳನ್ನು ತಿರಸ್ಕರಿಸಿದ ಭಾರತ

Update: 2024-02-09 15:19 GMT

Photo: NDTV 

ಹೊಸದಿಲ್ಲಿ : ಕೆನಡಾ ಚುನಾವಣೆಗಳಲ್ಲಿ ಪ್ರಭಾವ ಬೀರಲು ತಾನು ಪ್ರಯತ್ನಿಸಿದ್ದೆ ಎಂಬ ಆರೋಪಗಳನ್ನು ಭಾರತವು ಗುರುವಾರ ಬಲವಾಗಿ ತಿರಸ್ಕರಿಸಿದೆ.

‘ವಿದೇಶಿ ಹಸ್ತಕ್ಷೇಪಗಳ ಕುರಿತು ಕೆನಡಾ ಆಯೋಗದ ವಿಚಾರಣೆಯ ಕುರಿತು ಮಾಧ್ಯಮ ವರದಿಗಳನ್ನು ನಾವು ನೋಡಿದ್ದೇವೆ ಮತ್ತು ಕೆಲವು ಸಂಬಂಧಿತ ಬೆಳವಣಿಗೆಗಳೂ ನಡೆದಿವೆ ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು,‘ಕೆನಡಾದ ಚುನಾವಣೆಗಳಲ್ಲಿ ಭಾರತದ ಹಸ್ತಕ್ಷೇಪದ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಇತರ ದೇಶಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವುದು ಭಾರತ ಸರಕಾರದ ನೀತಿಯಲ್ಲ ’ ಎಂದು ಹೇಳಿದರು.

‘ಇದಕ್ಕೆ ವ್ಯತಿರಿಕ್ತವಾಗಿ ಕೆನಡಾವೇ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ. ಈ ವಿಷಯವನ್ನು ನಾವು ಅವರೊಂದಿಗೆ ನಿಯಮಿತವಾಗಿ ಎತ್ತುತ್ತಲೇ ಇದ್ದೇವೆ. ನಮ್ಮ ಪ್ರಮುಖ ಕಳವಳಗಳನ್ನು ನಿವಾರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೆನಡಾಕ್ಕೆ ಕರೆ ನೀಡುವುದನ್ನು ನಾವು ಮುಂದುವರಿಸುತ್ತೇವೆ ’ ಎಂದು ಜೈಸ್ವಾಲ್ ತಿಳಿಸಿದರು.

2019 ಮತ್ತು 2021ರ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದೇಶಗಳ ಹಸ್ತಕ್ಷೇಪ ಆರೋಪಗಳನ್ನು ಪರಿಶೀಲಿಸಲು ಕೆನಡಾ ಸರಕಾರವು ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಸ್ವತಂತ್ರ ಆಯೋಗವೊಂದನ್ನು ರಚಿಸಿದೆ.

ಕೆನಡಾದಲ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಚೀನಾದ ಪ್ರಯತ್ನಗಳ ಕುರಿತು ವರದಿಗಳಿಗೆ ಪ್ರತಿಕ್ರಿಯೆಯಾಗಿ ಸರಕಾರವು ಈ ಆಯೋಗವನ್ನು ಸ್ಥಾಪಿಸಿದೆ.

ಕಳೆದ ವರ್ಷದ ಜೂನ್ ನಲ್ಲಿ ವ್ಯಾಂಕೂವರ್ ನಲ್ಲಿ ಇಬ್ಬರು ಮುಸುಕುಧಾರಿ ವ್ಯಕ್ತಿಗಳಿಂದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿತ್ತು ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೆಪ್ಟಂಬರ್ನಲ್ಲಿ ದೇಶದ ಸಂಸತ್ತಿನಲ್ಲಿ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ.

ಭಾರತವು ಈ ಆರೋಪಗಳನ್ನು ತಿರಸ್ಕರಿಸಿದ್ದು,ಅವು ಅಸಂಬದ್ಧ ಮತ್ತು ಪ್ರೇರಿತ ಎಂದು ಬಣ್ಣಿಸಿತ್ತು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News