ಮಧ್ಯಂತರ ಬಜೆಟ್ 2024: ಆರು ಪ್ರಮುಖ ಅಂಶಗಳು

Update: 2024-02-01 12:38 GMT

ನಿರ್ಮಲಾ ಸೀತಾರಾಮನ್ | Photo: PTI 

ಹೊಸದಿಲ್ಲಿ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ ತನ್ನ ಮಧ್ಯಂತರ ಬಜೆಟ್ ಭಾಷಣವನ್ನು ಕೇವಲ ಒಂದು ಗಂಟೆಯಲ್ಲಿ ಮುಗಿಸಿದ್ದಾರೆ. ಅವರ ಬಜೆಟ್ ಭಾಷಣದಲ್ಲಿಯ ಪ್ರಮುಖ ಅಂಶಗಳು ಇಲ್ಲಿವೆ:

 ನಾಮಮಾತ್ರ ಜಿಡಿಪಿ ಬೆಳವಣಿಗೆ ಕುರಿತು ತಗ್ಗಿದ ನಿರೀಕ್ಷೆಗಳು:

ಯಾವುದೇ ಬಜೆಟ್ ನಲ್ಲಿ ನಾಮಮಾತ್ರ ಜಿಡಿಪಿಯು ಚರಾಂಶವಾಗಿರುತ್ತದೆ. ನಾವು ಸಾಮಾನ್ಯವಾಗಿ ಪ್ರಸ್ತಾವಿಸುವ ನೈಜ ಜಿಡಿಪಿ ಬೆಳವಣಿಗೆಯನ್ನು ನಾಮಮಾತ್ರ ಜಿಡಿಪಿ ಬೆಳವಣಿಗೆಯಿಂದ ಹಣದುಬ್ಬರವನ್ನು ತೆಗೆದುಹಾಕಿದ ಬಳಿಕ ಪಡೆಯಲಾಗುತ್ತದೆ. ಹೀಗಾಗಿ ನಿರ್ದಿಷ್ಟ ವರ್ಷವೊಂದರಲ್ಲಿ ನಾಮಮಾತ್ರ ಜಿಡಿಪಿ ಶೇ.12 ಮತ್ತು ಹಣದುಬ್ಬರ ಶೇ.4 ಆಗಿದ್ದರೆ ನೈಜ ಜಿಡಿಪಿಯು ಶೇ.8 ಆಗಿರುತ್ತದೆ.

ಸರಕಾರವು ಮುಂಬರುವ ವಿತ್ತವರ್ಷ (2024-25)ಕ್ಕೆ ಶೇ.10.5ರಷ್ಟು ನಾಮಮಾತ್ರ ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಿದೆ. ಇತ್ತೀಚಿನ ಬಜೆಟ್ ದಾಖಲೆಗಳಂತೆ ಸರಕಾರವು ಭಾರತದ ನಾಮಮಾತ್ರ ಜಿಡಿಪಿ 3,27,71,808 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಿದೆ. ಅದರ ಲೆಕ್ಕಾಚಾರದಂತೆ ಪ್ರಸಕ್ತ ವಿತ್ತವರ್ಷ (2023-24)ದ 2,96,57,745 ಕೋಟಿ ರೂ.ಗಳ ಅಂದಾಜು ನಾಮಮಾತ್ರ ಜಿಡಿಪಿಯು ಶೇ.10.5ರಷ್ಟು ಬೆಳೆಯಲಿದೆ.

► ವಿತ್ತೀಯ ಕೊರತೆಯಲ್ಲಿ ಗಮನಾರ್ಹ ಇಳಿಕೆ:

ವಿತ್ತೀಯ ಕೊರತೆಯು ಮೂಲಭೂತವಾಗಿ ಸರಕಾರವು ಮಾರುಕಟ್ಟೆಯಿಂದ ಸಾಲವಾಗಿ ಪಡೆಯುವ ಹಣವನ್ನು ತೋರಿಸುತ್ತದೆ. ತನ್ನ ವೆಚ್ಚಗಳು ಮತ್ತು ಆದಾಯಗಳ ನಡುವಿನ ಅಂತರವನ್ನು ಸರಿದೂಗಿಸಲು ಅದು ಸಾಲಗಳನ್ನು ಪಡೆಯುತ್ತದೆ. ಸರಕಾರವು ಹೆಚ್ಚು ಸಾಲವನ್ನು ಪಡೆದರೆ ಅದು ಖಾಸಗಿ ಕ್ಷೇತ್ರಗಳು ಸಾಲವನ್ನು ಪಡೆಯಲು ಕಡಿಮೆ ಹಣವನ್ನು ಉಳಿಸುತ್ತದೆ,ಇದು ಅಧಿಕ ಬಡ್ಡಿದರಗಳಿಗೆ ಕಾರಣವಾಗುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಮಂದಗೊಳಿಸುತ್ತದೆ. ಹೀಗಾಗಿ ವಿತ್ತೀಯ ಕೊರತೆಯು ಹೆಚ್ಚು ನಿಗಾಯಿರಿಸಲಾಗುವ ಚರಾಂಶವಾಗಿದೆ.

ಸರಕಾರವು ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.5.9ಕ್ಕೆ ತಗ್ಗಿಸಬಹುದು ಎಂದು ಬಜೆಟ್ ಗೆ ಮುನ್ನ ವಿಶ್ಲೇಷಕರು ನಿರೀಕ್ಷಿಸಿದ್ದರು. ವಿತ್ತೀಯ ಕೊರತೆಯನ್ನು ಶೇ.5.8ರ ಮಟ್ಟಕ್ಕೆ ಇಳಿಸಲಾಗಿದೆ ಎಂದು ಪ್ರಕಟಿಸುವ ಮೂಲಕ ಕೊಂಚ ಉತ್ತಮ ಸಾಧನೆಯನ್ನು ತೋರಿಸಿದ್ದಾರೆ. ಇದೇ ರೀತಿ ವಿತ್ತವರ್ಷ 25ಕ್ಕೆ ಜಿಡಿಪಿಯ ಶೇ.5.1 ಮತ್ತು ವಿತ್ತವರ್ಷ 26ಕ್ಕೆ ಜಿಡಿಪಿಯ ಶೇ.4.5ರಷ್ಟು ವಿತ್ತೀಯ ಕೊರತೆಯ ಮಹತ್ವಾಕಾಂಕ್ಷಿ ಗುರಿಗಳನ್ನು ಅವರು ಪ್ರಕಟಿಸಿದ್ದಾರೆ.

 ಈಡೇರದ ಬಂಡವಾಳ ವೆಚ್ಚ ಗುರಿ:

ಸರಕಾರದಿಂದ ಬಂಡವಾಳ ವೆಚ್ಚದಲ್ಲಿ ಏರಿಕೆಯು ಕಳೆದ ವರ್ಷದ ಮುಂಗಡಪತ್ರ ಮಂಡನೆಯ ಅಡಿಪಾಯವಾಗಿತ್ತು. ಬಂಡವಾಳ ವೆಚ್ಚದ ಗುರಿಯನ್ನು 10 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದ್ದಕ್ಕಾಗಿ ಭಾರೀ ಪ್ರಶಂಸೆಗಳೂ ವ್ಯಕ್ತವಾಗಿದ್ದವು. ಆದರೆ ಪರಿಷ್ಕೃತ ಅಂದಾಜುಗಳ ದತ್ತಾಂಶಗಳು ಈ ಗುರಿಯನ್ನು ಸಾಧಿಸಲಾಗಿಲ್ಲ ಎನ್ನುವುದನ್ನು ತೋರಿಸಿವೆ, ಅದು 9.5 ಲಕ್ಷ ಕೋ.ರೂ.ಗೆ ನಿಂತಿದೆ. ಇದು ವಿತ್ತೀಯ ಕೊರತೆಯ ಇಳಿಕೆಯಲ್ಲಿ ಅದರ ಕೊಂಚ ಕೊಡುಗೆಯನ್ನು ಸೂಚಿಸುತ್ತದೆ.

 ಆರೋಗ್ಯ ಮತ್ತು ಶಿಕ್ಷಣ ವೆಚ್ಚದಲ್ಲಿ ಕಡಿತ:

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕಾಗಿ ಬಜೆಟ್ ಹಂಚಿಕೆಗಳು ಭಾರತಕ್ಕೆ ಅಗತ್ಯವಿರುವುದಕ್ಕಿಂತ ತುಂಬ ಕಡಿಮೆಯಾಗಿವೆ, ಆದರೆ ಈ ಗುರಿಗಳನ್ನು ಸಹ ಪ್ರಸಕ್ತ ಹಣಕಾಸು ವರ್ಷದಲ್ಲಿ ತಲುಪಲು ಸಾಧ್ಯವಾಗಿಲ್ಲ ಎಂದು ಪರಿಷ್ಕೃತ ಅಂದಾಜುಗಳು ತೋರಿಸಿವೆ.

ಸರಕಾರವು ಶಿಕ್ಷಣಕ್ಕಾಗಿ 1,16,417 ಕೋಟಿ ರೂ.ಗಳ ವೆಚ್ಚವನ್ನು ಮಾಡಬೇಕಿತ್ತು, ಆದರೆ ಅದು 1,08,878 ಕೋಟಿ ರೂ.ಗಳಷ್ಟಾಗಿದೆ. ಇದೇ ರೀತಿ ಆರೋಗ್ಯಕ್ಕಾಗಿ 88,956 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು, ಆದರೆ ಸರಕಾರವು ವ್ಯಯಿಸಿದ್ದು 79,221ಕೋಟಿ ರೂ.ಗಳು.

 ದುರ್ಬಲ ವರ್ಗಳಿಗೆ ಪ್ರಮುಖ ಯೋಜನೆಗಳಲ್ಲಿ ಕಡಿತ:

ಎಸ್ಸಿ,ಎಸ್ಟಿ ಮತ್ತು ಅಲ್ಪಸಂಖ್ಯಾತರಂತಹ ದುರ್ಬಲ ವರ್ಗಗಳಿಗಾಗಿ ಪ್ರಮುಖ ಯೋಜನೆಗಳಿಗೆ ಬಜೆಟ್ ಹಂಚಿಕೆಯಲ್ಲಿ ಕಡಿತಗಳನ್ನು ಮಾಡಲಾಗಿದೆ.

ಎಸ್ಸಿಗಳಿಗಾಗಿ ಬಜೆಟ್ ಅಂದಾಜುಗಳಲ್ಲಿ 9,409 ಕೋ.ರೂ.ಗಳನ್ನು ನಿಗದಿಗೊಳಿಸಿದ್ದರೆ ಪರಿಷೃತ ಅಂದಾಜುಗಳಲ್ಲಿ ಅದು 6,780 ಕೋಟಿ ರೂ.ಆಗಿದೆ. ಎಸ್ಟಿಗಳಿಗೆ 4,295 ಕೋಟಿ ರೂ.ಇದ್ದುದು 3,286 ಕೋಟಿ ರೂ.ಗಳಿಗೆ ತಗ್ಗಿದೆ. ಅಲ್ಪಸಂಖ್ಯಾತರಿಗಾಗಿ ಹಂಚಿಕೆಯಲ್ಲಿ ತೀವ್ರ ಕಡಿತವಾಗಿದೆ. ಅದು ವಿತ್ತವರ್ಷ 24ರಲ್ಲಿಯ ಬಜೆಟ್ ಅಂದಾಜಿನ 610 ಕೋಟಿ ರೂ.ಗಳಿಂದ ಪರಿಷೃತ ಅಂದಾಜಿನಲ್ಲಿ 555 ಕೋಟಿ ರೂ.ಗೆ ಇಳಿದಿದೆ. ಇತರ ದುರ್ಬಲ ಗುಂಪುಗಳಿಗೆ ಹಂಚಿಕೆಯು 2,194 ಕೋಟಿ ರೂ.ಗಳಿಂದ 1,918 ಕೋಟಿ ರೂ.ಗಳಿಗೆ ಕಡಿತಗೊಂಡಿದೆ.

 ಆದಾಯ ತೆರಿಗೆ ಈಗ ಸರಕಾರಕ್ಕೆ ಅತ್ಯಂತ ದೊಡ್ಡ ಆದಾಯ ಮೂಲ:

ಸರಕಾರದ ಹೆಚ್ಚಿನ ಆದಾಯ ಮೂಲಗಳು ಸಾಲಗಳಾಗಿವೆ,ಆದರೆ ಇದರ ನಂತರದ ಸ್ಥಾನದಲ್ಲಿರುವ ಆದಾಯ ತೆರಿಗೆಯು ಅತ್ಯಂತ ದೊಡ್ಡ ಆದಾಯ ಮೂಲವಾಗಿದೆ. ವಿತ್ತವರ್ಷ 2025ರಲ್ಲಿ ಆದಾಯ ತೆರಿಗೆ ವರಮಾನವು ಎಲ್ಲ ಸರಕಾರಿ ಸಂಪನ್ಮೂಲಗಳ ಶೇ.19ರಷ್ಟಾಗಲಿದೆ ಎಂದು ಬಜೆಟ್ ದಾಖಲೆಗಳು ತೋರಿಸಿವೆ. ಕಾರ್ಪೊರೇಟ್ ತೆರಿಗೆ ಶೇ.17 ಮತ್ತು ಜಿಎಸ್ಟಿ ಶೇ.18ರಷ್ಟಿರಲಿದ್ದು,ಸಾಲಗಳು ಶೇ.28ರಷ್ಟಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News