ಎನ್ಐಎ, ಪಂಜಾಬ್ ಪೊಲೀಸರಿಂದ ಪನ್ನೂನ್ ವಿರುದ್ಧದ 35 ಪ್ರಕರಣಗಳ ತನಿಖೆ
ಹೊಸದಿಲ್ಲಿ: ‘ಸಿಕ್ಖ್ಸ್ ಫಾರ್ ಜಸ್ಟಿಸ್’ (SFJ)ನಾಯಕ ಗುರುಪತ್ವಂತ್ ಪನ್ನೂನ್ ವಿರುದ್ಧದ 35 ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಪನ್ನೂನ್ ಅನ್ನು ಭಾರತಕ್ಕೆ ಗಡಿ ಪಾರು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್ ಪೊಲೀಸರು ಪನ್ನೂನ್ ಹಾಗೂ ಆತನ ಸಹವರ್ತಿಗಳ ವಿರುದ್ಧ 2018ರಿಂದ ಇಂದಿನ ವರೆಗೆ 29 ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಪನ್ನೂನ್ ವಿರುದ್ಧ ಕನಿಷ್ಠ 6 ಪ್ರಕರಣಗಳ ತನಿಖೆ ನಡೆಸುತ್ತಿದೆ. ಇದರಲ್ಲಿ ‘ಸಿಕ್ಖ್ಸ್ ಫಾರ್ ಜಸ್ಟಿಸ್’ನಿಂದ ಅತಿದೊಡ್ಡ ಖಾಲಿಸ್ಥಾನ ಪಿತೂರಿಯ ತನಿಖೆ ನಡೆಸಲು 2019 ಹಾಗೂ 2021ರ ನಡುವೆ ನಾಲ್ಕು ಪ್ರಕರಣ ದಾಖಲಿಸಿದೆ.
ಅಮೆರಿಕದಲ್ಲಿ ಎಸ್ಎಫ್ಜೆಯ ಸ್ವಘೋಷಿತ ‘ಜನರಲ್ ಕೌನ್ಸೆಲ್’ ಆಗಿರುವ ಪನ್ನೂನ್ನನ್ನು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (UAPA) ಅಡಿಯಲ್ಲಿ ‘ಏಕವ್ಯಕ್ತಿ ಭಯೋತ್ಪಾದಕ’ ಎಂದು 2020 ಜುಲೈ 1ರಂದು ಘೋಷಿಸಲಾಗಿತ್ತು. ಈ ಪಟ್ಟಿ ಮಾಡಿರುವುದು ತನಿಖಾ ಸಂಸ್ಥೆಗಳು ಆತನ ವಿರುದ್ಧ ದೇಶಾದ್ಯಂತ ಕಾರ್ಯಾಚರಿಸಲು ಹಾಗೂ ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುವು ಮಾಡಿಕೊಟ್ಟಿತ್ತು.
ಎಸ್ಎಫ್ಜೆ, ಪನ್ನೂನ್ ಹಾಗೂ ಬ್ರಿಟನ್ ಮೂಲದ ಪರಮ್ಜಿತ್ ಸಿಂಗ್ ಪಮ್ಮಾ, ಕೆನಡಾ ಮೂಲದ ನಾಯಕ ಹತ ಹರ್ದೀಪ್ ಸಿಂಗ್ ನಿಜ್ಜಾರ್ರಂತಹ ಖಾಲಿಸ್ತಾನ ಪರ ನಾಯಕರ ಹಾಗೂ ಇತರರ ವಿರುದ್ಧದ ಅತಿದೊಡ್ಡ ಪಿತೂರಿಯ ತನಿಖೆಯ ಆರೋಪ ಪಟ್ಟಿಯನ್ನು ಎನ್ಐಎ 2020 ಡಿಸೆಂಬರ್ ನಲ್ಲಿ ಸಲ್ಲಿಸಿತ್ತು