ಮಹುವಾ ಮೊಯಿತ್ರಾ ಪ್ರಕರಣ: ಅತ್ಯಂತ ಪ್ರಮುಖ ವಿಷಯ ಎಂದು ಬಿಜೆಪಿ ಸಂಸದರಿಗೆ ಹೇಳಿದ ಕೇಂದ್ರ ಸಚಿವ
ಹೊಸ ದಿಲ್ಲಿ: ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ತಮ್ಮ ಸಂಸತ್ತಿನ ಲಾಗಿನ್ ಅನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪವು ಅತ್ಯಂತ ಪ್ರಮುಖವಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಷಯದ ಕುರಿತು ತನಿಖೆ ನಡೆಸಲು ಸಂಸತ್ತಿನ ನೈತಿಕ ಸಮಿತಿಯೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರವು ಸಹಕರಿಸಲಿದೆ ಎಂದೂ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
“ನಿಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಖಂಡಿತ ಅತ್ಯಂತ ಪ್ರಮುಖವಾಗಿವೆ. ನಿಮ್ಮ ಪತ್ರದಲ್ಲಿನ ವಿಷಯದ ಕುರಿತು ಸಂಸತ್ತಿನ ನೈತಿಕ ಸಮಿತಿಯು ತನಿಖೆ ನಡೆಸುತ್ತಿದೆ. ಈ ವಿಷಯದ ಕುರಿತು ಲೋಕಸಭಾ ಕಾರ್ಯಾಲಯವು ನೀಡುವ ಯಾವುದೇ ಸೂಚನೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರವು ಪ್ರಾಮಾಣಿಕವಾಗಿ ಸ್ಪಂದಿಸಲಿದೆ. ಈ ವಿಷಯದ ಕುರಿತು ತನಿಖೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರವು ತನ್ನೆಲ್ಲ ಸಹಕಾರವನ್ನು ನೀಡಲಿದೆ” ಎಂದು ಅವರು ತಮ್ಮ ಪತ್ರದಲ್ಲಿ ಭರವಸೆ ನೀಡಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ, “ನಕಲಿ ಪದವೀಧರನಿಗೆ ನನ್ನ ವಿರುದ್ಧ ತನಿಖೆ ನಡೆಸುವ ಭರವಸೆಯನ್ನು @AshwiniVaishnaw ನೀಡಿರುವುದನ್ನು ಕಂಡು ವಿಸ್ಮಯಗೊಂಡಿದ್ದೇನೆ” ಎಂದಿದ್ದು, “ಕಳೆದ ವರ್ಷ ತಮ್ಮ ಮಕ್ಕಳೊಂದಿಗೆ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಿದ್ದ ಫರ್ಜಿ ದುಬೆ ವಿರುದ್ಧ @HMOIndia & @Ministry_CAಯ ತನಿಖೆಗಾಗಿ ನಾನಿನ್ನೂ ಕಾಯುತ್ತಿದ್ದೇನೆ” ಎಂದು #BJPHitJobUnravelling!’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.
ಮಹುವಾ ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗಿನ್ ಐಡಿಯನ್ನು ಉದ್ಯಮಿ ದರ್ಶನ್ ಹೀರಾನಂದಾನಿ ಅವರೊಂದಿಗೆ ಹಂಚಿಕೊಂಡಿದ್ದು, ಅವರ ಪರವಾಗಿ ಮಹುವಾ ಮೊಯಿತ್ರಾ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದರು.