ನಾಯ್ಡು ಹೇಳಿಕೆಗಳು ‘ಅಪರಾಧ’ | ಜಗನ್ ಮೋಹನ್ ರೆಡ್ಡಿಯಿಂದ ಪ್ರಧಾನಿಗೆ ಪತ್ರ
ಅಮರಾವತಿ : ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪವನ್ನು ಬಳಸಿರುವುದಕ್ಕೆ ಸಂಬಂಧಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದ ತಯಾರಿಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬುದಾಗಿ ಇತ್ತೀಚೆಗೆ ಚಂದ್ರಬಾಬು ನಾಯ್ಡು ಆರೋಪಿಸಿದ ಬಳಿಕ, ರಾಜ್ಯದಲ್ಲಿ ರಾಜಕೀಯ ಮತ್ತು ಧಾರ್ಮಿಕ ಬಿರುಗಾಳಿ ಎದ್ದಿದೆ.
ತನ್ನ ಸರಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಜಗತ್ತಿನಾದ್ಯಂತವಿರುವ ಹಿಂದೂ ಭಕ್ತರ ನಡುವೆ ವೈಷಮ್ಯ ಸೃಷ್ಟಿಸಲು ಪವಿತ್ರ ಲಡ್ಡುಗಳನ್ನು ಬಳಸಿಕೊಂಡಿರುವುದಕ್ಕಾಗಿ ತನ್ನ ಪತ್ರದಲ್ಲಿ ರೆಡ್ಡಿ, ನಾಯ್ಡು ವಿರುದ್ಧ ಕಿಡಿಕಾರಿದ್ದಾರೆ.
ನಾಯ್ಡು ಅವರ ಕೃತ್ಯಗಳು ರಾಜಕೀಯ ಉದ್ದೇಶಗಳಿಂದ ಕೂಡಿರುವ ‘‘ಅಪರಾಧ’’ವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಣ್ಣಿಸಿದ್ದಾರೆ.
ಇಂಥ ಅಪಪ್ರಚಾರಗಳು ದೇವಸ್ಥಾನದ ಜಾಗತಿಕ ಪ್ರತಿಷ್ಠೆ ಮತ್ತು ಧಾರ್ಮಿಕ ಪಾವಿತ್ರ್ಯಕ್ಕೆ ತೀವ್ರ ಹಾನಿಯುಂಟು ಮಾಡಬಹುದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕಳೆದ ವಾರ, ತನ್ನ ಸರಕಾರ 100 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಭಾಷಣ ಮಾಡಿದ ಚಂದ್ರಬಾಬು ನಾಯ್ಡು, ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದ ತಯಾರಿಯಲ್ಲಿ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು. ಜಗನ್ಮೋಹನ್ ರೆಡ್ಡಿ ನೇತೃತ್ವದ ನಿಕಟಪೂರ್ವ ರಾಜ್ಯ ಸರಕಾರವು ತುಪ್ಪದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡು ದೇವಸ್ಥಾನದ ಪ್ರಸಾದದ ಪಾವಿತ್ರ್ಯವನ್ನು ಅಪಾಯಕ್ಕೆ ದೂಡಿತ್ತು ಎಂದು ಅವರು ಹೇಳಿದ್ದರು.
ಗುಜರಾತ್‌ನ ಆನಂದ್‌ನಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ)ಯ ಸಿಎಎಲ್‌ಎಫ್ ಪ್ರಯೋಗಾಲಯ ನೀಡಿದೆ ಎನ್ನಲಾದ ವರದಿಯನ್ನು ನಾಯ್ಡು ಉಲ್ಲೇಖಿಸಿದ್ದರು. 2024ರ ಜುಲೈ ತಿಂಗಳಲ್ಲಿ ತಿರುಮಲಕ್ಕೆ ಬಂದ ತುಪ್ಪದ ಟ್ಯಾಂಕರ್‌ನಿಂದ ಸಂಗ್ರಹಿಸಲಾದ ಮಾದರಿಗಳನ್ನು ಪರೀಕ್ಷೆಗಳಿಗೆ ಒಳಪಡಿಸಿದಾಗ, ಅವುಗಳಲ್ಲಿ ದನದ ಕೊಬ್ಬು, ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
‘‘ಅಪೂರ್ಣ ವರದಿಯೊಂದರ ಆಧಾರದಲ್ಲಿ, ತಿರುಮಲ ತಿರುಪತಿ ದೇವಸ್ಥಾನದಂಥ ಜಗತ್ಪ್ರಸಿದ್ಧ ದೇವಸ್ಥಾನವೊಂದರ ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯಕ್ಕೆ ಹಾನಿ ಮಾಡಬಲ್ಲ ಹಾಗೂ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರಬಲ್ಲ ಇಂಥ ಆಘಾತಕಾರಿ ಆರೋಪಗಳನ್ನು ಯಾವುದೇ ಜವಾಬ್ದಾರಿಯುತ ವ್ಯಕ್ತಿ ಮಾಡಬಾರದು’’ ಎಂದು ರೆಡ್ಡಿ ಹೇಳಿದರು.
‘‘ಕಲಬೆರಕೆ ತುಪ್ಪವನ್ನು ತಿರಸ್ಕರಿಸಲಾಗಿತ್ತು’’
ಈ ವಿವಾದಿತ ತುಪ್ಪವು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದಾಗ ಅದನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರಸ್ಕರಿಸಿತ್ತು ಹಾಗೂ ಅದನ್ನು ಯಾವತ್ತೂ ಪ್ರಸಾದ ತಯಾರಿಯಲ್ಲಿ ಬಳಸಲಾಗಿಲ್ಲ ಎಂದು ಜಗನ್ಮೋಹನ್ ರೆಡ್ಡಿ ಹೇಳಿದ್ದಾರೆ.
ದೇವಸ್ಥಾನದಲ್ಲಿ ಬಳಸಲಾಗುವ ತುಪ್ಪದ ಖರೀದಿ ಮತ್ತು ಪರೀಕ್ಷೆಗೆ ಪ್ರಬಲ ವಿಧಿವಿಧಾನಗಳು ಚಾಲ್ತಿಯಲ್ಲಿವೆ ಎಂದು ರೆಡ್ಡಿ ಹೇಳಿದರು.
‘‘ಪರೀಕ್ಷೆಯಲ್ಲಿ ಒಂದು ಮಾದರಿ ವಿಫಲವಾದರೂ, ಇಡೀ ಟ್ಯಾಂಕರ್ ತುಪ್ಪವನ್ನೇ ತಿರಸ್ಕರಿಸಲಾಗುತ್ತದೆ’’ ಎಂದು ಅವರು ನುಡಿದರು. 2014ರಿಂದ 2019ರವರೆಗೆ ನಾಯ್ಡು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಯಾವ ವಿಧಿವಿಧಾನಗಳು ಚಾಲ್ತಿಯಲ್ಲಿದ್ದವೋ ಅವೇ ವಿಧಿವಿಧಾನಗಳನ್ನು ನನ್ನ ಅಧಿಕಾರಾವಧಿಯಲ್ಲೂ ಅನುಸರಿಸಲಾಗಿತ್ತು’’ ಎಂದು ಅವರು ಹೇಳಿದರು.