ಜಮ್ಮು: ಪಾಕಿಸ್ತಾನದ ರೇಂಜರ್‌ಗಳಿಂದ ಗುಂಡಿನ ದಾಳಿ
ಜಮ್ಮು : ಜಮ್ಮು ಹಾಗೂ ಕಾಶ್ಮೀರದ ಸಾಂಬಾ ಜಿಲ್ಲೆಯ ರಾಮಗಢ ವಲಯದ ಅಂತರ್ ರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಪಾಕಿಸ್ತಾನ ರೇಂಜರ್‌ಗಳು ಗುರುವಾರ ಮುಂಜಾನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧನೋರ್ವ ಹುತಾತ್ಮನಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಗಡಿ ಹೊರ ಠಾಣೆಗಳನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿರುವುದು ಜಮ್ಮು ಮುಂಚೂಣಿಯ ಅಂತರ್ ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‌ಗಳು ಕಳೆದ 24 ದಿನಗಳಲ್ಲಿ ನಡೆಸಿದ ಮೂರನೇ ಕದನ ವಿರಾಮ ಉಲ್ಲಂಘನೆಯಾಗಿದೆ.
ನವೆಂಬರ್ 8ರಂದು ತಡ ರಾತ್ರಿ ರಾಮಗಢ ಪ್ರದೇಶದಲ್ಲಿ ಪಾಕಿಸ್ತಾನದ ರೇಂಜರ್‌ಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಬಿಎಸ್‌ಎಫ್ ತಕ್ಕ ಪ್ರತ್ಯುತ್ತರ ನೀಡಿತು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಗುಂಡಿನ ದಾಳಿಯಿಂದ ಬಿಎಸ್‌ಎಫ್‌ನ ಓರ್ವ ಯೋಧ ಗಾಯಗೊಂಡಿದ್ದರು. ಅವರನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಆತ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.