ಜಮ್ಮು ಕಾಶ್ಮೀರ ವಿಧಾನ ಸಭಾ ಚುನಾವಣೆ| 7 ಪಕ್ಷೇತರರ ಗೆಲುವು

Update: 2024-10-08 15:25 GMT

ಸಾಂದರ್ಭಿಕ ಚಿತ್ರ | PC : PTI 

ಜಮ್ಮು : ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗಮನಾರ್ಹ ಸಾಧನೆಯನ್ನು ಪ್ರದರ್ಶಿಸಿದ್ದಾರೆ. 2014ರ ಚುನಾವಣೆಯಲ್ಲಿ ಕೇವಲ ಮೂವರು ಪಕ್ಷೇತರರು ಗೆದ್ದಿದ್ದರೆ 2024ರ ಚುನಾವಣೆಯಲ್ಲಿ ಏಳು ಪಕ್ಷೇತರರು ವಿಜಯಮಾಲೆ ಧರಿಸಿದ್ದಾರೆ.

ಕಾಂಗ್ರೆಸ್ ತೊರೆದು ಜಮ್ಮು ಪ್ರದೇಶದ ಛಂಬ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸತೀಶ ಶರ್ಮಾ ಬಿಜೆಪಿಯ ರಾಜೀವ ಶರ್ಮಾರನ್ನು 6,929 ಮತಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಇಂದರವಾಲ್ ಕ್ಷೇತ್ರದಲ್ಲಿ ಪಕ್ಷೇತರ ಪ್ಯಾರೆಲಾಲ್ ಶರ್ಮಾ ಅವರು ಹಿರಿಯ ನಾಯಕ ಹಾಗೂ ಪಕ್ಷೇತರ ಅಭ್ಯರ್ಥಿ ಗುಲಾಂ ಮುಹಮ್ಮದ್ ಸರೂರಿ ಅವರನ್ನು 643 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಬಾನಿಯಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ರಾಮೇಶ್ವರ ಸಿಂಗ್ ಅವರು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜೀವನಲಾಲ್ ಅವರನ್ನು 2,048 ಮತಗಳಿಂದ ಸೋಲಿಸಿದ್ದರೆ, ಸುರಾನಕೋಟ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಎನ್‌ಸಿ ಬಂಡುಕೋರ ಚೌಧರಿ ಮುಹಮ್ಮದ್ ಅಕ್ರಮ್ ಅವರು ಕಾಂಗ್ರೆಸ್‌ನ ಮುಹಮ್ಮದ್ ಶಾಹನವಾಝ್‌ರನ್ನು 8,851 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಥಾನಾಮಂಡಿ ಕ್ಷೇತ್ರದಲ್ಲಿ ಪಕ್ಷೇತರ ಮುಝಫ್ಫರ್ ಇಕ್ಬಾಲ್ ಖಾನ್ ಅವರು ಬಿಜೆಪಿಯ ಮುಹಮ್ಮದ್ ಇಕ್ಬಾಲ್ ಮಲಿಕ್‌ರನ್ನು 6,179 ಮತಗಳಿಂದ ಸೋಲಿಸಿದ್ದಾರೆ.

ಲಂಗೇಟ್ ಕ್ಷೇತ್ರದಲ್ಲಿ ಖುರ್ಷಿದ್ ಅಹ್ಮದ್ ಶೇಖ್ ಅವರು ಪೀಪಲ್ಸ್ ಕಾನ್ಫರೆನ್ಸ್‌ನ ಇರ್ಫಾನ್ ಸುಲ್ತಾನ್ ಪಂಡಿತಪುರಿ ಅವರನ್ನು1,602 ಮತಗಳಿಂದ ಸೋಲಿಸಿದ್ದರೆ ಶೋಪಿಯಾನ್ ಕ್ಷೇತ್ರದಲ್ಲಿ ಪಕ್ಷೇತರ ಶಬ್ಬೀರ್ ಅಹ್ಮದ್ ಕುಲ್ಲೆ ಅವರು ಎನ್‌ಸಿ ಅಭ್ಯರ್ಥಿ ಶೇಖ್ ಮುಹಮ್ಮದ್ ರಫಿಯವರನ್ನು 1,207 ಮತಗಳ ಅಂತರದಿಂದ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.

ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 346 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು,ಈ ಪೈಕಿ 339 ಜನರು ಸೋಲನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News