ಜಾರ್ಖಂಡ್: ವಾಮಾಚಾರದಲ್ಲಿ ತೊಡಗಿದ್ದ ಆರೋಪದಲ್ಲಿ ವೃದ್ಧೆಯನ್ನು ಥಳಿಸಿ ಹತ್ಯೆ
ರಾಂಚಿ: ವಾಮಾಚಾರದಲ್ಲಿ ತೊಡಗಿದ್ದ ಅರೋಪದಲ್ಲಿ ಜಾರ್ಖಂಡ್ ನಲ್ಲಿ 58ರ ಹರೆಯದ ಮಹಿಳೆಯನ್ನು ಗ್ರಾಮಸ್ಥರು ಥಳಿಸಿ ಹತ್ಯೆಗೈದಿದ್ದಾರೆ.
ಗುಮ್ಲಾ ಜಿಲ್ಲೆಯ ನಗರ-ಚಾದ್ರಿ ಗ್ರಾಮದ ನಿವಾಸಿ ಸಾಲೋದೇವಿ ಕೊಲೆಯಾಗಿರುವ ಮಹಿಳೆ. ಗ್ರಾಮದಲ್ಲಿಯ ಕೂಲಿ ಕಾರ್ಮಿಕನೋರ್ವನ ಒಂದೂವರೆ ವರ್ಷ ಪ್ರಾಯದ ಮಗಳು ಅನಾರೋಗ್ಯಕ್ಕೀಡಾದ ಬಳಿಕ ವಾಮಾಚಾರವನ್ನು ಶಂಕಿಸಿದ್ದ ಗ್ರಾಮಸ್ಥರು ಸಾಲೋದೇವಿಯನ್ನು ಹೊಣೆಯಾಗಿಸಿದ್ದರು.
ಶನಿವಾರ ರಾತ್ರಿ ಸಾಲೋದೇವಿಯ ಮನೆ ಬಾಗಿಲನ್ನು ತಟ್ಟಿದ್ದ ಸುಮಾರು 8-10 ಜನರು ಆಕೆಯ ಪುತ್ರನನ್ನು ಮದ್ಯಸೇವನೆಗೆಂದು ಕರೆದೊಯ್ದಿದ್ದರು. ಬಳಿಕ 10:30ರ ಸುಮಾರಿಗೆ ಸಾಲೋದೇವಿ ಊಟ ಮಾಡುತ್ತಿದ್ದಾಗ ಕೆಲವು ಗ್ರಾಮಸ್ಥರು ಆಕೆಯನ್ನು ಮನೆಯಿಂದ ಹೊರಗೆಳೆದು ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಸಾಲೋದೇವಿಯ ರಕ್ಷಣೆಗಾಗಿ ಆಕೆಯ ಪತಿ ಆಹ್ಲಾದ್ ಲೋಹ್ರಾ, ಸೋದರಿ ಸಬಿತಾ ಕುಮಾರಿ ಮತ್ತು ಅತ್ತಿಗೆ ಲಕ್ಷ್ಮಿಕುಮಾರಿ ಧಾವಿಸಿದಾಗ ಗ್ರಾಮಸ್ಥರು ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿದ್ದರು ಎಂದು ಗ್ರಾಮದ ನಿವಾಸಿಯೋರ್ವರು ತಿಳಿಸಿದರು.
ಇದಕ್ಕೂ ಮುನ್ನ ಒಂಭತ್ತು ಗಂಟೆಯ ಸುಮಾರಿಗೆ ಅನಾರೋಗ್ಯಪೀಡಿತ ಮಗುವಿನ ತಾಯಿ ವಾಮಾಚಾರವನ್ನು ನಡೆಸಿದ್ದಕ್ಕಾಗಿ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾಲೋದೇವಿಗೆ ಬೆದರಿಕೆ ಹಾಕಿದ್ದಳು. ಸಾಲೋದೇವಿಯನ್ನು ರಕ್ಷಿಸಿದ ಪೋಲಿಸರು ಸಮೀಪದ ಸಿಸೈ ಆಸ್ಪತ್ರೆಗೆ ಸಾಗಿಸಿದ್ದರಾದರೂ ಆ ವೇಳೆಗಾಗಲೇ ಆಕೆ ಕೊನೆಯುಸಿರೆಳೆದಿದ್ದಳು.
ಗ್ರಾಮದಲ್ಲಿ ಹೆಣ್ಣುಮಗುವೊಂದು ಅಸ್ವಸ್ಥಗೊಂಡ ಬಳಿಕ ವಾಮಾಚಾರದ ಶಂಕೆಯಲ್ಲಿ ಸಾಲೋ ದೇವಿಯನ್ನು ಹೊಡೆದು ಕೊಲ್ಲಲಾಗಿದೆ ಎಂದು ಪೊಲೀಸರೂ ಪ್ರತಿಪಾದಿಸಿದ್ದಾರೆ.
ಸಿಸೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ 10 ಜನರನ್ನು ಹೆಸರಿಸಲಾಗಿದ್ದು, ಇತರ ಹಲವು ಅಪರಿಚಿತರನ್ನೂ ಸೇರಿಸಲಾಗಿದೆ. ಸದ್ಯಕ್ಕೆ ಒಂಭತ್ತು ಜನರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಗುಮ್ಲಾ ಎಸ್ಪಿ ಎಹ್ತೆಶಾಮ್ ವಕಾರಿಬ್ ಸುದ್ದಿಸಂಸ್ಥೆಗೆ ತಿಳಿಸಿದರು.