ಜಾರ್ಖಂಡ್ ಭೂ ಹಗರಣ : ಈಡಿ ಸಮನ್ಸ್ ಪ್ರಶ್ನಿಸಿ ಸಿಎಂ ಸೊರೇನ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ರಾಂಚಿ : ಭೂ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈಡಿ ತನ್ನ ವಿರುದ್ಧ ಜಾರಿಗೊಳಿಸಿದ ಸಮನ್ಸ್ ಪ್ರಶ್ನಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿದ ಅರ್ಜಿಯನ್ನು ಜಾರ್ಖಂಡ್ ಉಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಗಮನಾರ್ಹ ವಿಚಾರವೆಂದರೆ, ಜಾರಿ ನಿರ್ದೇಶನಾಲಯ ಸೊರೇನ್ ಅವರಿಗೆ ಐದು ಬಾರಿ ಸಮನ್ಸ್ ನೀಡಿತ್ತು. ಆದರೆ, ಅವರು ಪ್ರತಿ ಬಾರಿ ಒಂದಲ್ಲ ಒಂದು ಕಾರಣ ನೀಡಿ ಹಾಜರಾಗಿರಲಿಲ್ಲ.
ಮುಖ್ಯ ನ್ಯಾಯಮೂರ್ತಿ ಸಂಜಯ್ ಕುಮಾರ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಆನಂದ ಸೇನ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠದ ಮುಂದೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪರವಾಗಿ ಹಿರಿಯ ನ್ಯಾಯವಾದಿಗಳಾದ ಪಿ. ಚಿದಂಬರಂ, ಕಪಿಲ್ ಸಿಬಲ್ ಹಾಗೂ ನ್ಯಾಯವಾದಿ ಪಿಯೂಷ್ ಚಿತ್ರೇಶ್ ವಾದ ಮಂಡಿಸಿದರು. ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದರು.
ಉಚ್ಚ ನ್ಯಾಯಾಲಯದ ವಿಚಾರಣೆ ಸಂದರ್ಭ ಜಾರಿ ನಿರ್ದೇಶನಾಲಯ, ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ತಾನು ನೀಡಿದ ಯಾವುದೇ ಸಮನ್ಸ್ ಗೆ ಹಾಜರಾಗದೆ ಉಲ್ಲಂಘಿಸಿದ್ದಾರೆ. ಆದುದರಿಂದ ಇಂತಹ ಪರಿಸ್ಥಿತಿಯಲ್ಲಿ ಅವರು ಸಮನ್ಸ್ ಅನ್ನು ಪ್ರಶ್ನಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಆದುದರಿಂದ ಅವರಿಗೆ ಯಾವುದೇ ಪರಿಹಾರ ನೀಡಬಾರದು ಎಂದು ಎಸ್.ವಿ. ರಾಜು ಹೇಳಿದರು.
ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಸೊರೇನ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾರಿ ನಿರ್ದೇಶನಾಲಯ ಅವರಿಗೆ ಸಮನ್ಸ್ ನೀಡುವುದು ಸೂಕ್ತವಾದುದಲ್ಲ ಎಂದರು.
ವಾದ ಪ್ರತಿವಾದವನ್ನು ಆಲಿಸಿದ ಉಚ್ಚ ನ್ಯಾಯಾಲಯ ಹೇಮಂತ್ ಸೊರೇನ್ ಅವರ ಅರ್ಜಿಯನ್ನು ತಿರಸ್ಕರಿಸಿತು.