ಹೆಚ್ಚುವರಿ ಜಿಲ್ಲಾಧಿಕಾರಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಿಪಿಐ(ಎಂ) ನಾಯಕಿ ದಿವ್ಯಾರನ್ನು ಆಹ್ವಾನಿಸಿರಲಿಲ್ಲ: ಕಣ್ಣೂರು ಜಿಲ್ಲಾಧಿಕಾರಿ ಪುನರುಚ್ಛಾರ
ತಿರುವನಂತಪುರಂ: ಕೇರಳ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಕಣ್ಣೂರು ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಕಣ್ಣೂರು ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ನವೀನ್ ಬಾಬು ಅವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಿಪಿಐ(ಎಂ) ನಾಯಕಿ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಪಿ.ಪಿ.ದಿವ್ಯಾರನ್ನು ನಾನು ಆಹ್ವಾನಿಸಿರಲಿಲ್ಲ ಎಂದು ಮಂಗಳವಾರ ಪುನರುಚ್ಛರಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ದಿವ್ಯಾರನ್ನು ಆಹ್ವಾನಿಸಿದ್ದಿರಾ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಸಭೆಗೂ ಮುನ್ನ ನಾನು ದಿವ್ಯಾರಿಂದ ಫೋನ್ ಕರೆಯನ್ನು ಸ್ವೀಕರಿಸಿದ್ದೆ ಹಾಗೂ ಆ ಕರೆಯ ದಾಖಲೆಗಳನ್ನು ನಾನು ತನಿಖಾಧಿಕಾರಿಗಳಿಗೆ ಒದಗಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
“ಅದೂ ಕೂಡಾ ಹೇಳಿಕೆಯ ಭಾಗವಾಗಿದೆ. ನನಗೆ ಫೋನ್ ಕರೆ ಬಂದಿತ್ತು. ಇವೆಲ್ಲವೂ ತನಿಖೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ನಾನು ಅವುಗಳ ವಿವರವನ್ನಿಲ್ಲಿ ಬಹಿರಂಗಗೊಳಿಸುವುದಿಲ್ಲ” ಎಂದು ವಿಜಯನ್ ಹೇಳಿದ್ದಾರೆ.
ಪೊಲೀಸ್ ತನಿಖೆಯೇ ಆಗಿರಲಿ ಅಥವಾ ಇಲಾಖಾ ವಿಚಾರಣೆಯೇ ಆಗಿರಲಿ, ಮೊದಲು ವರದಿ ಬರಲಿ. ಆಗ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಸಭೆಗೆ ದಿವ್ಯಾರನ್ನು ಆಹ್ವಾನಿಸಿರಲಿಲ್ಲ ಎಂದು ಪುನರುಚ್ಛರಿಸಿದ್ದಾರೆ. ಈ ಸಂಬಂಧ ನಾನು ತನಿಖಾಧಿಕಾರಿಗಳಿಗೆ ಹೇಳಿಕೆಯನ್ನೂ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 14ರಂದು ಕಣ್ಣೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ಅವರಿಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಹ್ವಾನವಿಲ್ಲದೆ ಭಾಗವಹಿಸಿದ್ದ ಸಿಪಿಐ(ಎಂ) ನಾಯಕಿ ಹಾಗೂ ಕಣ್ಣೂರು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ದಿವ್ಯಾ, ಚೆಂಗಲೈನಲ್ಲಿನ ಪೆಟ್ರೋಲ್ ಪಂಪ್ ಒಂದಕ್ಕೆ ನಿರಾಕ್ಷೇಪಣಾ ಪತ್ರ ನೀಡುವಲ್ಲಿ ನವೀನ್ ಬಾಬು ಭ್ರಷ್ಟಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಮರು ದಿನವೇ ನವೀನ್ ಬಾಬು ತಮ್ಮ ಕ್ವಾರ್ಟರ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ನವೀನ್ ಬಾಬು ಅವರ ಆತ್ಮಹತ್ಯೆಯು ಕೇರಳ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದ್ದು, ವಿರೋಧ ಪಕ್ಷಗಳು ಆಡಳಿತಾರೂಢ ಸಿಪಿಐ(ಎಂ) ಮೇಲೆ ಮುಗಿಬಿದ್ದಿವೆ. ಇದರ ಬೆನ್ನಿಗೇ, ದಿವ್ಯಾ ಅವರನ್ನು ಕಣ್ಣೂರು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಹುದ್ದೆಯಿಂದ ಆಡಳಿತಾರೂಢ ಸಿಪಿ(ಐ)ಎಂ ಪದಚ್ಯುತಗೊಳಿಸಿದೆ.