ಕರ್ನಾಟಕದಲ್ಲಿ 9,000 ಕೋಟಿ ರೂ.ಗಳ ಆ್ಯನೋಡ್ ಸ್ಥಾವರ : ಎಪ್ಸಿಲಾನ್ ಎಂಡಿ
ಹೊಸದಿಲ್ಲಿ : ಬ್ಯಾಟರಿ ಬಿಡಿಭಾಗಗಳ ತಯಾರಕ ಎಪ್ಸಿಲಾನ್ ಅಡ್ವಾನ್ಸ್ಡ್ ಮಟೀರಿಯಲ್ಸ್ ಕರ್ನಾಟಕದಲ್ಲಿ 9,000 ಕೋಟಿ ರೂ.ವೆಚ್ಚದಲ್ಲಿ ವಾರ್ಷಿಕ 90,000 ಟನ್ ಉತ್ಪಾದನಾ ಸಾಮರ್ಥ್ಯದ ಆ್ಯನೋಡ್ (ಧ್ರುವೀಕೃತ ವಿದ್ಯುತ್ ಸಾಧನದ ವಿದ್ಯುದ್ವಾರ) ಸ್ಥಾವರವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಎಪ್ಸಿಲಾನ್ ಗ್ರೂಪ್‌ನ ಆಡಳಿತ ನಿರ್ದೇಶಕ (ಎಂಡಿ) ವಿಕ್ರಮ್ ಹಾಂಡಾ ಅವರು ತಿಳಿಸಿದ್ದಾರೆ.
ಸ್ಥಾವರದಲ್ಲಿ ಮೊದಲ ಹಂತದಲ್ಲಿ 4,000 ಕೋಟಿ ರೂ.ಮತ್ತು ಎರಡನೇ ಹಂತದಲ್ಲಿ 5,000 ಕೋಟಿ ರೂ.ಗಳ ಹೂಡಿಕೆಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.
2026ನೇ ಸಾಲಿನ ನಾಲ್ಕನೇ ತ್ರೈಮಾಸಿಕದೊಳಗೆ ಭಾರತದಲ್ಲಿ 30,000 ಟನ್ ಆ್ಯನೋಡ್ ಸ್ಥಾವರ ಸ್ಥಾಪನೆಯನ್ನು ನಾವು ನಿರೀಕ್ಷಿಸಿದ್ದೇವೆ. ಇದಕ್ಕಾಗಿ 4,000 ಕೋಟಿ ರೂ.ಹೂಡಿಕೆಯಾಗಲಿದೆ. 2031ರ ವೇಳೆಗೆ ಸಾಮರ್ಥ್ಯವನ್ನು 90,000 ಟನ್‌ಗೆ ಹೆಚ್ಚಿಸಲಾಗುವುದು. ಮುಂದಿನ ಎಂಟು ವರ್ಷಗಳಲ್ಲಿ ನಮ್ಮ ವಾರ್ಷಿಕ ವ್ಯವಹಾರಕ್ಕೆ ಒಟ್ಟು 9,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದೆ ಎಂದು ಹಾಂಡಾ ವಿವರಿಸಿದರು.