ಕರ್ನಾಟಕ, ಹಿಮಾಚಲಪ್ರದೇಶ, ಅಸ್ಸಾಂಗೆ ಅತ್ಯಧಿಕ ನೆರೆ ಪರಿಹಾರ : ಕೇಂದ್ರ ಸರಕಾರ
ಹೊಸದಿಲ್ಲಿ : 2022-2024ರ ನಡುವಿನ ಎರಡು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಯಿಂದ ಕರ್ನಾಟಕ, ಹಿಮಾಚಲಪ್ರದೇಶ ಹಾಗೂ ಅಸ್ಸಾಂಗೆ ಅತ್ಯಧಿಕ ಪರಿಹಾರದ ಹಣ ನೀಡಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ರಾಜ್ಯ ಸಭೆಗೆ ತಿಳಿಸಿದೆ.
ಪಾಕೃತಿಕ ವಿಪತ್ತುಗಳಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ಹಾಗೂ ಪುನರ್ವಸತಿಗೆ ಈ ಹಣವನ್ನು ನೀಡಲಾಗಿದೆ ಎಂದು ಅದು ಹೇಳಿದೆ.
2022-24ರ ಅವಧಿಯಲ್ಲಿ ಕೇಂದ್ರದ ಉನ್ನತ ಮಟ್ಟದ ಸಮಿತಿ ನೆರೆ ಮತ್ತು ಭೂಕುಸಿತಕ್ಕೆ ಸಂಬಂಧಿಸಿ ಪರಿಹಾರ ಒದಗಿಸಲು ಕರ್ನಾಟಕಕ್ಕೆ 941 ಕೋಟಿ ರೂ., ಹಿಮಾಚಲಪ್ರದೇಶಕ್ಕೆ 873 ಕೋಟಿ ರೂ. ಹಾಗೂ ಅಸ್ಸಾಂಗೆ 594 ಕೋಟಿ ರೂ. ನೀಡಲು ಅನುಮೋದನೆ ನೀಡಿತ್ತು ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ಲಿಖಿತ ಪ್ರತಿಕ್ರಿಯೆಯಲ್ಲಿ ನಿತ್ಯಾನಂದ ರಾಯ್, ಕಳೆದ 2 ವರ್ಷಗಳಲ್ಲಿ ಎನ್ಡಿಆರ್ಎಫ್ನಿಂದ ಕರ್ನಾಟಕಕ್ಕೆ 939 ಕೋಟಿ ರೂ., ಹಿಮಾಚಲಪ್ರದೇಶಕ್ಕೆ 812 ಕೋಟಿ ರೂ. ಹಾಗೂ ಅಸ್ಸಾಂಗೆ 160 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ನೆರೆ, ಚಂಡಮಾರುತಕ್ಕೆ ತಮಿಳುನಾಡಿಗೆ 276 ಕೋಟಿ ರೂ., ನೆರೆ ಹಾಗೂ ಭೂಕುಸಿತಕ್ಕೆ ಸಿಕ್ಕಿಂಗೆ 267 ಕೋಟಿ ರೂ., ನಾಗಾಲ್ಯಾಂಡ್ಗೆ 68 ಕೋಟಿ ರೂ. ನೀಡಲಾಗಿದೆ ಎಂದು ರಾಯ್ ಹೇಳಿದರು.
ಇದೇ ವೇಳೆ ಮಿಝೋರಾಂ, ಮಣಿಪುರದಲ್ಲಿ ರೆಮಲ್ ಚಂಡಮಾರುತ ಹಾಗೂ ಅಸ್ಸಾಂ, ಕೇರಳದಲ್ಲಿ ಭೂಕುಸಿತದಿಂದ ಉಂಟಾದ ಹಾನಿಯನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡಲು ವಿವಿಧ ಸಚಿವಾಯಲಯಗಳಿಂದ ಆಯ್ಕೆ ಮಾಡಿದ ಸದಸ್ಯರನ್ನು ಒಳಗೊಂಡ ಸಮಿತಿ (ಐಎಂಟಿಸಿ)ಗಳನ್ನು 2024 ಜುಲೈ 31ರಂದು ರೂಪಿಸಲಾಗಿದೆ ಎಂದು ನಿತ್ಯಾನಂದ ರಾಯ್ ತಿಳಿಸಿದರು.