ಕೇರಳ: ಸಿಪಿಎಂ ಶಾಸಕ ಮೊಯ್ದಿನ್ ನಿವಾಸದ ಮೇಲೆ ಈಡಿ ದಾಳಿ

Update: 2023-08-22 15:48 GMT

 ಎ.ಸಿ. ಮೊಯ್ದಿನ್ | Photo: PTI  

ಕೊಚ್ಚಿ: ಕರುವನ್ನೂರು ಕೋ-ಆಪರೇಟಿವ್ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈಡಿ) ಸಿಪಿಎಂ ಶಾಸಕ ಹಾಗೂ ಸ್ಥಳೀಯಾಡಳಿತದ ಮಾಜಿ ಸಚಿವ ಎ.ಸಿ. ಮೊಯ್ದಿನ್ ಅವರ ತ್ರಿಶೂರ್‌ನಲ್ಲಿರುವ ನಿವಾಸದ ಮೇಲೆ ಮಂಗಳವಾರ ದಾಳಿ ನಡೆಸಿದೆ.

ವಡಕ್ಕಂಚೇರಿ ಸಮೀಪದ ತೆಕ್ಕುಂಕಾರದಲ್ಲಿರುವ ಮೊಯ್ದಿನ್ ಅವರ ನಿವಾಸದ ಮೇಲೆ ಕೊಚ್ಚಿಯ ಜಾರಿ ನಿರ್ದೇಶನಾಲಯದ ತಂಡ ದಾಳಿ ನಡೆಸಿತು. ಈ ಕಾರ್ಯಾಚರಣೆ ಬೆಳಗ್ಗೆ ಸುಮಾರು 7 ಗಂಟೆಗೆ ಆರಂಭವಾಯಿತು.

ಈ ಪ್ರಕರಣದ ಆರೋಪಿಗಳೊಂದಿಗೆ ಮೊಯ್ದಿನ್ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ಈ ಹಗರಣದ ಬಗ್ಗೆ ಮೊಯ್ದಿನ್ ಅವರಿಗೆ ಸಂಪೂರ್ಣ ಅರಿವು ಇತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲಿ ಎಂದು ಹಲವು ಠೇವಣಿದಾರರು ಹೇಳಿಕೆ ನೀಡಿರುವುದಾಗಿ ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಯಾವುದೇ ಭದ್ರತೆ ಒದಗಿಸದೆ ಕರುವನ್ನೂರು ಕೋ-ಆಪರೇಟಿವ್ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡವರು ಮೊಯ್ದಿನ್ ಅವರ ನಿಕಟ ಒಡನಾಡಿಯಾಗಿದ್ದರು ಎಂದು ಠೇವಣಿದಾರರು ಆರೋಪಿಸಿದ್ದಾರೆ.

ಈ ಸಾಲಗಳನ್ನು ಮೊಯ್ದಿನ್ ಅವರ ನಿರ್ದೇಶನದಂತೆ ಮಂಜೂರು ಮಾಡಲಾಗಿದೆಯೇ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಸದ್ಯೋಭವಿಷ್ಯದಲ್ಲಿ ಮೊಯ್ದಿನ್ ಅವರ ವಿಚಾರಣೆಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡುವ ಸಾಧ್ಯತೆ ಇದೆ.

ಸಿಪಿಎಂ ನಾಯಕರಾಗಿರುವ ಮೊಯ್ದಿನ್ ಅವರು ಪ್ರಸಕ್ತ ಕನ್ನಂಕುಲಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News